ಬೆಂಗಳೂರು: ನಿಗದಿತ ಟೋಲ್ ದರಕ್ಕಿಂತ 5 ರೂಪಾಯಿ ಹೆಚ್ಚು ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 8 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ.
ಬೆಂಗಳೂರು -ತುಮಕೂರು ನಡುವಿನ ಜೆಎಎಸ್ ಟೋಲ್ ಕಂಪನಿ 5 ರೂಪಾಯಿ ಹೆಚ್ಚುವರಿ ಟೋಲ್ ಶುಲ್ಕ ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿದಾರರಿಗೆ 5000 ರೂ. ಪರಿಹಾರ, 3,000 ರೂ. ವ್ಯಾಜ್ಯ ವೆಚ್ಚ ಸೇರಿ 8000 ರೂ. ಪರಿಹಾರ ನೀಡಲು ಆದೇಶ ನೀಡಿದೆ.
ಬೆಂಗಳೂರಿನ ಗಾಂಧಿನಗರದ ಎಂ.ಬಿ. ಸಂತೋಷ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ ಮತ್ತು ಸದಸ್ಯರಾದ ಎನ್. ಜ್ಯೋತಿ, ಎಸ್.ಎಂ. ಶರಾವತಿ ಅವರನ್ನು ಒಳಗೊಂಡ ಪೀಠ ಆದೇಶ ನೀಡಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಸಂಗ್ರಹಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೆಎಎಸ್ ಟೋಲ್ ಕಂಪನಿ ಕ್ರಮಕ್ಕೆ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.