ಟೋಕಿಯೊ ಒಲಂಪಿಕ್ಸ್ ಬುಧವಾರದಿಂದ ಆರಂಭಗೊಂಡಿದೆ. ಜುಲೈ 23ರಂದು ಅಧಿಕೃತ ಚಾಲನೆ ಸಿಗುವುದೊಂದೇ ಬಾಕಿಯಿದೆ. ಹಿಂದಿನ ಯಾವುದೇ ಒಲಂಪಿಕ್ಸ್ ನಲ್ಲಿ ನಡೆಯದ ಕೆಲವು ಘಟನೆಗಳಿಗೆ ಈ ಬಾರಿಯ ಒಲಂಪಿಕ್ಸ್ ಸಾಕ್ಷಿಯಾಗಲಿದೆ.
ಕೆಲ ಕಾರಣಗಳಿಂದ 2020ರಲ್ಲಿ ಒಲಂಪಿಕ್ಸ್ ನಡೆಯಲಿಲ್ಲ. ಹಾಗಾಗಿ 2021ರಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಬೆಸ ವರ್ಷದಲ್ಲಿ ಒಲಂಪಿಕ್ಸ್ ನಡೆಯುತ್ತಿರುವುದು ಇದೇ ಮೊದಲು. ಈ ಹಿಂದೆ 1896, 1900, 1904……2016 ಹೀಗೆ ಸಮ ವರ್ಷದಲ್ಲಿ ಒಲಂಪಿಕ್ಸ್ ನಡೆದಿತ್ತು.
ಪದಕ ಗೆದ್ದ ಆಟಗಾರ ಖುದ್ದು ತಾನೇ ತನ್ನ ಕೊರಳಿಗೆ ಪದಕವನ್ನು ಹಾಕಿಕೊಳ್ಳಲಿದ್ದಾನೆ. ಸಾಮಾಜಿಕ ಅಂತರದ ಕಾರಣದಿಂದಾಗಿ ಆಟಗಾರನ ಕೊರಳಿಗೆ ಬೇರೆಯವರು ಪದಕ ಹಾಕ್ತಿಲ್ಲ.
ಈ ಬಾರಿ ಆಟಗಾರರಿಗೆ ಸಿಗ್ತಿರುವ ಪದಕವೂ ವಿಶೇಷವಾಗಿದೆ. ದಾನದಲ್ಲಿ ಸಿಕ್ಕ ಚಿನ್ನದಿಂದ ಪದಕ ಸಿದ್ಧಪಡಿಸಲಾಗಿದೆ.
ಒಲಂಪಿಕ್ಸ್ ಕ್ರೀಡೆಗಳನ್ನು ವೀಕ್ಷಿಸಲು ಇದೇ ಮೊದಲ ಬಾರಿ ಯಾವುದೇ ಪ್ರೇಕ್ಷಕರು ಮೈದಾನಕ್ಕೆ ಬರ್ತಿಲ್ಲ. ಕ್ರೀಡಾಭಿಮಾನಿಗಳು ಟಿವಿಯಲ್ಲಿಯೇ ಪಂದ್ಯಗಳನ್ನು ವೀಕ್ಷಿಸಬೇಕಾಗಿದೆ.
ಇದೇ ಮೊದಲ ಬಾರಿ ಸಂಘಟಕರಿಗೆ ನೆರವಾಗಲು ರೋಬೋಟ್ ಬಳಸಲಾಗ್ತಿದೆ. ಜಾವೆಲಿನ್ ಥ್ರೋನಂತಹ ಆಟದಲ್ಲಿಯೂ ಇದನ್ನು ಬಳಸಲಾಗುವುದು. ಇದ್ರಿಂದ ಸಮಯ ಉಳಿಯಲಿದೆ.
ಕರಾಟೆ, ಸ್ಪೋರ್ಟ್ಸ್ ಕ್ಲೈಂಬಿಂಗ್, ಸರ್ಫಿಂಗ್ ಮತ್ತು ಸ್ಕೇಟ್ಬೋರ್ಡಿಂಗ್ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದೆ.
ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಬಾಕ್ಸಿಂಗ್‌ನ 5 ಸ್ಪರ್ಧೆಗಳು ನಡೆಯಲಿವೆ. ಬಾಕ್ಸಿಂಗ್‌ನಲ್ಲಿ ಮಹಿಳಾ ವಿಭಾಗದ ಸ್ಪರ್ಧೆಯನ್ನು 3 ರಿಂದ 5 ಕ್ಕೆ ಹೆಚ್ಚಿಸಲಾಗಿದೆ. ಪುರುಷರ ಸ್ಪರ್ಧೆಗಳ ಸಂಖ್ಯೆಯನ್ನು 10 ರಿಂದ 8 ಕ್ಕೆ ಇಳಿಸಲಾಗಿದೆ.
ಫ್ರೀಸ್ಟೈಲ್ ಬಿಎಂಎಕ್ಸ್, ಮ್ಯಾಡಿಸನ್ ಸೈಕ್ಲಿಂಗ್, 3×3 ಬಾಸ್ಕೆಟ್‌ಬಾಲ್ ಸ್ಪರ್ಧೆಗಳು ಮೊದಲ ಬಾರಿಗೆ ನಡೆಯಲಿದೆ. ಟೇಬಲ್ ಟೆನಿಸ್‌ನಲ್ಲಿ ಮಿಶ್ರ ಡಬಲ್ಸ್ ಮತ್ತು ಜೂಡೋದಲ್ಲಿ ಮಿಶ್ರ ತಂಡದ ಸ್ಪರ್ಧೆ ಮೊದಲ ಬಾರಿಗೆ ಕಂಡುಬರಲಿದೆ. 2008 ರ ನಂತರ ಬೇಸ್‌ಬಾಲ್ ಮತ್ತು ಸಾಫ್ಟ್ ಬಾಲ್ ಈ ವರ್ಷ ವಾಪಸ್ ಆಗ್ತಿವೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ 33 ಕ್ರೀಡೆಗಳಲ್ಲಿ 339 ಸ್ಪರ್ಧೆಗಳು ಪಾಲ್ಗೊಳ್ಳಲಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಸ್ಪರ್ಧೆ ನಡೆಯಲಿದೆ.
ಎರಡನೇ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೊಂಡಿರುವ ಏಷ್ಯಾದ ಮೊದಲ ನಗರವಾಗಿದೆ ಟೋಕಿಯೊ. ಇದಕ್ಕೂ ಮುನ್ನ 1964 ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆದಿತ್ತು.