ಅರಮನೆ ನಗರಿ ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಸಂಭ್ರಮದ ಐದನೇ ದಿನವಾದ ಇಂದು ದುರ್ಗೆಯ ಐದನೇ ಅವತಾರವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತಿದೆ. ಕೋಡಿ ಸೋಮೇಶ್ವರ ದೇಗುಲದಿಂದ ಕಳಸವನ್ನು ತಂದು ಪಟ್ಟದ ಆನೆ, ಹಸು, ಒಂಟೆ ಹಾಗೂ ಕುದುರೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವೇರಲಿದ್ದಾರೆ. ಸ್ಕಂದಮಾತೆ ಸಂಪತ್ತಿನ ಸಂಕೇತವಾಗಿದ್ದಾಳೆ.
ಇನ್ನು ವಿಜಯದಶಮಿ ದಿನದಂದು ಅಂಬಾರಿ ಹೊರಲು ಅಭಿಮನ್ಯು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ತಿದ್ದಾನೆ. ಶುಕ್ರವಾರದಂದು ನಡೆಯಲಿರುವ ಜಂಬೂ ಸವಾರಿಯ ಪ್ರಯುಕ್ತ ಅಭಿಮನ್ಯವಿಗೆ ಅಂಬಾರಿಯನ್ನು ಹೊರುವ ತಾಲೀಮನ್ನು ನೀಡಲಾಗುತ್ತಿದೆ.
ಜಂಬೂ ಸವಾರಿಯಲ್ಲಿ ಭಾರದ ಅಂಬಾರಿಯನ್ನು ಹೊರುವ ಅಭಿಮನ್ಯುವಿಗೆ ಜಂಬು ಸವಾರಿಯಲ್ಲಿ ಈ ಬಾರಿ ಹೆಣ್ಣು ಆನೆಗಳಾದ ಕಾವೇರಿ ಹಾಗೂ ಚೈತ್ರಾ ಸಾಥ್ ನೀಡಲಿವೆ. ರಿಹರ್ಸಲ್ ನಡೆಯುವ ಸ್ಥಳದಲ್ಲಿ ಅಶ್ವದಳ ಹಾಗೂ ಪೊಲೀಸ್ ಪಡೆ ಕೂಡ ಭಾಗಿಯಾಗಿದೆ.
ಈ ಬಾರಿಯ ಜಂಬೂ ಸವಾರಿ ಅತ್ಯಂತ ಸರಳವಾಗಿ ನೆರವೇರಲಿದ್ದು ಮೆರವಣಿಗೆ ಕೇವಲ 6 ಸ್ತಬ್ಧಚಿತ್ರಗಳು ಮಾತ್ರ ಇರಲಿವೆ. ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮೇಶೇಖರ್ ಚಾಲನೆ ನೀಡಿದ್ದಾರೆ.