ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದಲ್ಲಿ ಅವರ ನೆಲದಿಂದಲೇ ಸ್ವಾತಂತ್ರ ಹೋರಾಟದ ಕಹಳೆ ಮೊಳಗಿಸಲು ಕಾರಣಕರ್ತವಾಗಿದ್ದ ಐತಿಹಾಸಿಕ ಇಂಡಿಯಾ ಕ್ಲಬ್ ಗೆ ಸೆಪ್ಟೆಂಬರ್ 17ರ ಇಂದು ಬೀಗಮುದ್ರೆ ಬೀಳಲಿದೆ. ಲಂಡನ್ ನಲ್ಲಿದ್ದ ಇಂಡಿಯಾ ಕ್ಲಬ್ ಗೆ ಇಂದು ಕೊನೆಯ ದಿನವಾಗಿದೆ.
ಲಂಡನ್ ಕೇಂದ್ರ ಭಾಗದಲ್ಲಿರುವ ಈ ಕಟ್ಟಡದ ಮಾಲೀಕರು ಇದನ್ನು ಈಗ ಆಧುನಿಕ ಹೋಟೆಲ್ ಆಗಿ ಪರಿವರ್ತಿಸಲು ಮುಂದಾಗಿದ್ದು, ಹೀಗಾಗಿ ತೆರವುಗೊಳಿಸುವಂತೆ ಇಂಡಿಯಾ ಕ್ಲಬ್ ಮಾಲೀಕರಿಗೆ ಬಹು ಹಿಂದೆಯೇ ನೋಟಿಸ್ ನೀಡಿದ್ದರು. ಅದರಂತೆ ಇಂದು ಕೊನೆಯದಾಗಿ ಈ ಕ್ಲಬ್ ಕಾರ್ಯ ನಿರ್ವಹಿಸಲಿದ್ದು, ಇದೇ ಕಟ್ಟಡದಲ್ಲಿದ್ದ ಬ್ರಿಟನ್ ನ ಪ್ರಥಮ ಭಾರತೀಯ ರೆಸ್ಟೋರೆಂಟ್ ಕೂಡ ಮುಚ್ಚಲಿದೆ ಎಂದು ಹೇಳಲಾಗಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೃಷ್ಣ ಮೆನನ್ ಸೇರಿದಂತೆ ಅನೇಕ ರಾಷ್ಟ್ರೀಯವಾದಿಗಳಿಗೆ ನೆಲೆಯಾಗಿದ್ದ ಈ ಕ್ಲಬ್, ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಆರಂಭವಾಗಲು ಕಾರಣವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬ್ರಿಟನ್ ನ ದಕ್ಷಿಣ ಏಷ್ಯಾ ಸಮುದಾಯದವರು ಇದನ್ನು ಒಗ್ಗೂಡುವ ತಾಣವಾಗಿ ಮಾರ್ಪಡಿಸಿಕೊಂಡಿದ್ದರು.