
ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ 1999 ಫೆಬ್ರವರಿ 7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಪಡೆದುಕೊಳ್ಳುವ ಮೂಲಕ ನಿಬ್ಬೆರಗಾಗುವಂತೆ ಮಾಡಿದ್ದರು. ಕನ್ನಡಿಗನ ಈ ಸಾಧನೆಗೆ 25 ವರ್ಷಗಳಾಗಿದ್ದು, ಭಾರತದ ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ದೆಹಲಿ ಕ್ರೀಡಾಂಗಣದಲ್ಲಿ ನಡೆದ ಈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅನಿಲ್ ಕುಂಬ್ಳೆ ನಾಲ್ಕು ವಿಕೆಟ್ ಪಡೆದುಕೊಂಡರೆ ಎರಡನೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದುಕೊಂಡಿದ್ದರು. ಭಾರತ ತಂಡ 252 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಹಲವಾರು ದಾಖಲೆ ಬರೆದಿರುವ ಅನಿಲ್ ಕುಂಬ್ಳೆ 132 ಪಂದ್ಯಗಳ ನಾಡಿದ್ದು ಒಟ್ಟಾರೆ 619 ವಿಕೆಟ್ ಕಬಳಿಸಿದ್ದಾರೆ.