ಮೈಸೂರು: ರಾಜ್ ಬಿ.ಶೆಟ್ಟಿ ಅಭಿನಯದ ಟೋಬಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ ಇನ್ನು ಕೆಲವರಿಗೆ ಇಷ್ಟವಾಗಿಲ್ಲ, ಟೋಬಿ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿದ ಯುವತಿಯೊಬ್ಬಳನ್ನು ಥಿಯೇಟರ್ ಮುಂದೆಯೇ ತರಾಟೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಮೈಸೂರಿನ ಸಂಗಮ್ ಚಿತ್ರ ಮಂದಿರದಲ್ಲಿ ಈ ಘಟನೆ ನಡೆದಿದೆ. ಟೋಬಿ ಚಿತ್ರ ವೀಕ್ಷಿಸಿ ಥಿಯೇಟರ್ ನಿಂದ ಹೊರಬಂದ ಯುವತಿ ಚಿತ್ರ ಚೆನ್ನಾಗಿಲ್ಲ ಎಂದು ಯೂಟ್ಯೂಬ್ ಚಾನಲ್ ಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಯುವತಿಯ ಮಾತು ಕೇಳಿದ ವ್ಯಕ್ತಿಯೊಬ್ಬ ಯುವತಿಯನ್ನು ಬಾಯಿಗೆ ಬಂದಂತೆ ಬೈದಿದ್ದಾನೆ. ಕನ್ನಡ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತಿಯಾ ಎಂದು ಕೂಗಾಡಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದೇ ವೇಳೆ ಸಿನಿಮಾ ನೋಡಿದ ಇನ್ನು ಕೆಲವರು ಟೋಬಿ ಚಿತ್ರವನ್ನು ನಾವು ನೋಡಿದ್ದೇವೆ. ಸಿನಿಮಾ ಚೆನ್ನಾಗಿದೆ. ಯುವತಿ ಸಿನಿಮಾ ಚೆನ್ನಾಗಿಲ್ಲ ಎಂದು ಯಾಕೆ ಹೇಳಿದಳು ಗೊತ್ತಾಗಿಲ್ಲ. ಯಾರೋ ಆಕೆಗೆ ಹಾಗೆ ಹೇಳು ಎಂದು ಹೇಳಿ ಕಳುಹಿಸಿರಬೇಕು ಎಂದು ಯುವತಿಯನ್ನು ಬೈದಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎಂದು ಯುವತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಯುವತಿಯದೇ ತಪ್ಪು ಎಂದು ಬೈದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಟ ರಾಜ್ ಬಿ.ಶೆಟ್ಟಿ, ಈ ಘಟನೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಪ್ರೇಕ್ಷಕರು ಸಿನಿಮಾವನ್ನು ನೋಡಿ ತಮಗನಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಾರೆ ಇನ್ನು ಕೆಲವರು ಚೆನ್ನಾಗಿಲ್ಲ ಎಂದು ಹೇಳುತ್ತಾರೆ. ಸಿನಿಮಾ ನೋಡಿ ಅವರಿಗೇನು ಅನಿಸಿತು ಅದನ್ನು ಹೇಳುತ್ತಾರೆ. ಅಭಿಪ್ರಾಯ ವ್ಯಕ್ತಪಡಿಸು ಅವರು ಸ್ವತಂತ್ರರು ಅದನ್ನು ನಾವು ಒಪ್ಪಿಕೊಳ್ಳಬೇಕು. ಇನ್ನು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ ಯುವತಿಯನ್ನು ನಿಂದಿಸಿದ ವ್ಯಕ್ತಿಗೂ ಸುನಿಮಾ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಮೈಸೂರಿನ ಥಿಯೇಟರ್ ಬಳಿ ನಡೆದ ಘಟನೆ ಬಗ್ಗೆ ಕ್ಷಮೆಯಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಕ್ಷಮೆ ಕೇಳಿದ್ದಾರೆ.