ಬೆಂಗಳೂರು: ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು.
ಆಯ್ದ ಅಂಗಡಿಗಳಲ್ಲಿ ಮಾತ್ರ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ತಂಬಾಕು ವ್ಯಸನಕ್ಕೆ ಕಡಿವಾಣ ಹಾಕಲಾಗುತ್ತದೆ. ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಿಗೆ ಟ್ರೇಡ್ ಲೈಸೆನ್ಸ್ ನೀಡುವ ಮಾದರಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಚಿಂತನೆ ನಡೆದಿದೆ.
ಶಾಲಾ, ಕಾಲೇಜು ಸಮೀಪ, ಉದ್ಯಾನವನ, ದೇಗುಲ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನಿಯಮ ರೂಪಿಸಲಾಗಿದೆ. ಹೀಗಿದ್ದರೂ, ಗ್ರಾಹಕರಿಗೆ ಕಾಣುವಂತೆ ತಂಬಾಕು ಉತ್ಪನ್ನಗಳನ್ನು ನೇತುಹಾಕಿ 18 ವರ್ಷದೊಳಗಿನವರಿಗೂ ಮಾರಾಟ ಮಾಡಲಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೀಗಾಗಿ ತಂಬಾಕು ಮಾರಾಟಕ್ಕಿರುವ ನಿಯಮಗಳೊಂದಿಗೆ ಲೈಸೆನ್ಸ್ ಪಡೆಯಲು ಕಠಿಣ ನಿಯಮ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.