ಬೆಂಗಳೂರು : ದೀಪಗಳನ್ನು ಬೆಳಗಿಸುವುದು ಕತ್ತಲೆಯನ್ನು ಹೋಗಲಾಡಿಸಿ, ಸಂತೋಷದ ಭರವಸೆ ಮೂಡಿಸುವಂತದ್ದು.ಆದರೆ, ಈ ಸಂತಸವು ಪಟಾಕಿ ಸಿಡಿಸುವ ಸಮಯದಲ್ಲಿ ಸಂಭವಿಸುವ ದುರಂತಗಳಿಂದ ಮಾಸಿಹೋಗಬಾರದು. ಹಾಗಾಗಿ, ಸಾರ್ವಜನಿಕರು ಮತ್ತು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ನವೆಂಬರ್ 12 ರಿಂದ 14ರವರೆಗೆ ಜರುಗಲಿರುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅಪಘಾತ ಹಾಗೂ ಇತರೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ನಿಭಾಯಿಸಲು ಮುನ್ನೆಚ್ಚರಿಕೆ ವಹಿಸಿ ಸಾರ್ವಜನಿಕರು ಯಾವ್ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರಾದ ಟಿ.ಎನ್.ಶಿವಶಂಕರ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಆಯಾ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಿರಿದಾದ, ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳ ಸ್ಥಳಗಳಲ್ಲಿ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು, ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದು., ಪಟಾಕಿಗಳನ್ನು ಸರ್ಕಾರದ ಅಧಿಕಾರಿಗಳು ನಿಗದಿಪಡಿಸಿದ ತೆರೆದ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತರವರು ಅನುಮತಿ ನೀಡಲಾಗಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಮಾತ್ರ ದಾಸ್ತಾನು ಮಾಡಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಬಹುದಾಗಿದೆ.
ಜಿಲ್ಲಾ ದಂಡಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಸೂಚಿಸುವ ತೆರೆದ ಪ್ರದೇಶಗಳನ್ನು ಪರೀಕ್ಷಿಸಿ ಸೂಕ್ತ ಸುರಕ್ಷತಾ ಕ್ರಮಗಳ ಬಗ್ಗೆ ವಿವರ ನೀಡಲು ಕೋರಿಕೆ ಬಂದಲ್ಲಿ ಇಲಾಖಾ ನಿಯಮದಂತೆ ಹಾಗೂ ಈ ಮೊದಲು ನೀಡಿದ ಸುತ್ತೋಲೆಗಳಂತೆ ನಿಮ್ಮ ಅಭಿಪ್ರಾಯವನ್ನು ಸದರಿ ಅಧಿಕಾರಿಗಳಿಗೆ ಮಾತ್ರ ತಿಳಿಸಬಹುದು. ಹಾಗೂ ಅಂತಹ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ನೇರವಾಗಿ ವಸೂಲಿ ಮಾಡುವ ಅವಶ್ಯಕತೆ ಇಲ್ಲ. ಇದರ ಬದಲು ಸಂಬಂಧಪಟ್ಟ ಜಿಲ್ಲಾ ದಂಡಾಧಿಕಾರಿ ಅಥವಾ ಪೊಲೀಸ್ ಆಯುಕ್ತರವರಿಗೆ ಪ್ರತಿಯೊಬ್ಬ ಅರ್ಜಿದಾರರಿಂದ ಪರವಾನಿಗೆ ನೀಡುವಾಗ ಸರ್ಕಾರಿ ಆದೇಶದಂತೆ ನಿಗದಿತ ಶುಲ್ಕ ರೂ.5,000 ಗಳನ್ನು ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡುವಂತೆ ಕೋರಬಹುದು. ಒಂದು ವೇಳೆ ಸದರಿ ಪ್ರಾಧಿಕಾರವು ಅಗ್ನಿಶಾಮಕ ಸೇವಾ ಇಲಾಖೆಯಿಂದ ಪ್ರತ್ಯೇಕ ಆಕ್ಷೇಪಣಾ ರಹಿತ ಪ್ರಮಾಣ ಪತ್ರ ಕೋರಿದ್ದಲ್ಲಿ ಅಂತಹ ಸಂದರ್ಭಗಳಲ್ಲಿ ನಿಗದಿತ ಶುಲ್ಕ ರೂ.5,000 ಗಳನ್ನು ಅರ್ಜಿದಾರರಿಂದ ವಸೂಲಿ ಮಾಡಿ ಖಜಾನೆಗೆ ಜಮಾ ಮಾಡಿ ಹಾಗೂ ವಿವರಗಳನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ತಾತ್ಕಾಲಿಕ ಪಟಾಕಿ ಸಂಗ್ರಹಣೆ ಮಾಡಿ ಮಾರಾಟ ಮಾಡಲು ನಿರ್ಮಿಸಬೇಕಾದ ಮಳಿಗೆಗಳ ವಿವರಗಳು: ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು, ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದಷ್ಟೂ ಬೆಂಕಿಯನ್ನು ತಡೆಗಟ್ಟುವ (fire retardant) ಸಾಮಗ್ರಿಗಳನ್ನು ನಿರ್ಮಾಣಕ್ಕೆ ಉಪಯೋಗಿಸಬೇಕು. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು. ಪ್ರತಿಯೊಂದು ಮಳಿಗೆಗಳ ಗಾತ್ರ 10X10 ಚದರ ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.
ಪ್ರತಿಯೊಂದು ಮಳಿಗೆಗಳಲ್ಲಿ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರಬೇಕು:
ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೆಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್ ಗಳಲ್ಲಿ ನೀರನ್ನು ಇಟ್ಟಿರಬೇಕು. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್ ನಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು, ಮಳಿಗೆಯಲ್ಲಿ ಅಡಿಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂಬಂತೆ ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು. ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡುವಂತೆ ತಿಳಿಸಲಾಗುತ್ತಿದೆ. ಹಾಗೂ ರಾತ್ರಿ ವೇಳೆ ಮಳಿಗೆಯಲ್ಲಿ ಯಾರು ಮಲಗಬಾರದೆಂದು ಸೂಚಿಸಬೇಕು.
ಅನಧಿಕೃತ ಮಾರಾಟದ ವ್ಯವಹಾರವು ಗಮನಕ್ಕೆ ಬಂದರೆ ಕೂಡಲೇ ಸಂಬಂಧಪಟ್ಟ ಪರವಾನಿಗೆ ನೀಡುವ ಅಧಿಕಾರಿಗಳ ಗಮನಕ್ಕೆ ತರಬೇಕು. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂಬ ಆದೇಶವಿರುವುದರಿಂದ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಮಳಿಗೆ ಹಾಗೂ ಗೋದಾಮುಗಳನ್ನು ಪರಿಶೀಲಿಸಿ ಅಲ್ಲಿ ಹಸಿರು ಪಟಾಕಿ ಹೊರತುಪಡಿಸಿ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಪರವಾನಿಗೆ ನೀಡುವ ಪ್ರಾಧಿಕಾರಿಗಳ ಗಮನಕ್ಕೆ ತರಬೇಕು .
ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಸಿಸಬೇಕು. ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಗಾಗಿ ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಬೆಳಕಿನ ಹಬ್ಬ ದೀಪಾವಳಿಯನ್ನು ಸಂತಸ ಸಡಗರದಿಂದ ಆಚರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಅವರ ಮನವಿ.
ಪಟಾಕಿ ಸಿಡಿಸುವಾಗ ಈ ಎಚ್ಚರಿಕೆ ಕ್ರಮಗಳನ್ನು ಪಾಲಿಸಿ
ಕೈಯಲ್ಲಿ ಹಿಡಿದು ಪಟಾಕಿಗಳನ್ನು ಹಚ್ಚಬೇಡಿ
ವ್ಯಕ್ತಿ ಅಥವಾ ಪ್ರಾಣಿಗಳ ಮೇಲೆ ಪಟಾಕಿಗಳನ್ನು ಎಸೆಯಬೇಡಿ
ಹೊತ್ತಿಸಿದ ಪಟಾಕಿಯನ್ನು ಕೈಯಿಂದ ಮುಟ್ಟಬೇಡಿ
ಭೂಚಕ್ರ, ಹೂಕುಂಡ ಸೇರಿ ಕ್ರ್ಯಾಕರ್ ಗಳನ್ನು ತೆರೆದ ಸ್ಥಳಗಳಲ್ಲಿ ಹೊತ್ತಿಸಿ
ಸುರುಸುರು ಬತ್ತಿ ಹೊತ್ತಿಸುವಾಗ ಮುಖಕ್ಕೆ ಹತ್ತಿರ ಹಿಡಿಯಬೇಡಿ
ಉಸಿರಾಟದ ಸಮಸ್ಯೆ ಇರುವವರು ವಿಷಕಾರಿ ಅನಿಲ ಹೊರಸೂಸುವ ಪಟಾಕಿ ಹೊತ್ತಿಸಬೇಡಿ
ಜೋರು ಶಬ್ದ ಮಾಡುವ ಪಟಾಕಿಗಳನ್ನು ನಾಲ್ಕು ಮೀಟರ್ ದೂರದಲ್ಲಿ ನಿಂತು ಹೊತ್ತಿಸಿ
ಮಕ್ಕಳ ಕೈಗೆ ಪಟಾಕಿ ಹೊತ್ತಿಸಲು ಕೊಡಬೇಡಿ.