alex Certify BIG NEWS : ‘ಸೈಬರ್ ಕ್ರೈಂ’ , ರೌಡಿಗಳ ಹಾವಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ಪೊಲೀಸರಿಗೆ ಗೃಹ ಸಚಿವ. ಜಿ. ಪರಮೇಶ್ವರ್ ಖಡಕ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಸೈಬರ್ ಕ್ರೈಂ’ , ರೌಡಿಗಳ ಹಾವಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ಪೊಲೀಸರಿಗೆ ಗೃಹ ಸಚಿವ. ಜಿ. ಪರಮೇಶ್ವರ್ ಖಡಕ್ ಸೂಚನೆ

ಚಿತ್ರದುರ್ಗ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಸೈಬರ್ ಕ್ರೈಂ ಬಗ್ಗೆ ಜನಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟಬೇಕು ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಸಂಪೂರ್ಣವಾಗಿ ಮಟ್ಟ ಹಾಕಬೇಕು. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿ ಮಾದರಿಯಾಗಿ ಹೊರ ಹೊಮ್ಮಬೇಕು. ಪೆಡ್ಲರ್ಗಳು ಹೊರ ರಾಜ್ಯಗಳಿಂದ ವಿವಿಧ ಬಗೆಯ ಡ್ರಗ್ಸ್ ಸರಬರಾಜು ಮಾಡುತ್ತಿರುತ್ತಾರೆ. ಈ ಕುರಿತಂತೆ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಬೇಕು. ಹೊರ ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಬೇಕು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಚಟಗಳಿಗೆ ಮಾರು ಹೋಗುತ್ತಿದ್ದು, ಅವರ ಚಟುವಟಿಕೆಗಳ ಮೇಲೆ ನಿಗಾವಹಿಸುವುದು ಅಗತ್ಯ. ಡ್ರಗ್ಸ್ ಸೇವಿಸುವವರು ಅಥವಾ ಪೂರೈಕೆ ಮಾಡುವವರು ಸಿಕ್ಕಿಬಿದ್ದರೆ, ಮೂಲ ಆರೋಪಿಯನ್ನು ಪತ್ತೆ ಹಚ್ಚುವವರೆಗೂ ತನಿಖೆ ಕೈಗೊಳ್ಳಬೇಕು. ಡ್ರಗ್ಸ್ ಸೇವನೆ ತಪ್ಪು, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಮನೆ ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳನ್ನು ಮಟ್ಟ ಹಾಕಲು, ಆರೋಪಿಗಳ ಚಲವಲನದ ಮೇಲೆ ನಿಗಾವಹಿಸಲು ಪೊಲೀಸರ ಗಸ್ತು ತಿರುಗುವುದು ಹೆಚ್ಚಾಗಬೇಕು. ಠಾಣೆಗಳಲ್ಲಿ ಹೆಲ್ಪಿಂಗ್ ಡೆಸ್ಕ್, ಸಿ.ಸಿ ಕ್ಯಾಮರಾ ಇರಬೇಕು. ದೂರು ನೀಡಲು ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಪೊಲೀಸ್ ಅಧಿಕಾರಿಗಳು ತಾಳ್ಮೆವಹಿಸಿ ಆಲಿಸಬೇಕು. ಠಾಣೆಗಳಲ್ಲಿ ಜನರ ದೂರುಗಳಿಗೆ, ಸ್ಪಂದಿಸುವ ಕಾರ್ಯವಾಗಬೇಕು, ಒಟ್ಟಾರೆ ಪೊಲೀಸ್ ಠಾಣೆಗಳಲ್ಲಿ ‘ಜನಸ್ನೇಹಿ ಪೆÇಲೀಸ್’ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ಕಿಡಿಗೇಡಿಗಳು ಧರ್ಮ, ಜಾತಿ ಹೆಸರಲ್ಲಿ ಅವಹೇಳನಕಾರಿ  ಪೋಸ್ಟರ್ ಗಳನ್ನು  ಸೃಷ್ಟಿಸಿ ಗಲಭೆ ಉಂಟು ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುತ್ತಾರೆ. ಎಲ್ಲಿಯೋ ನಡೆದ ಘಟನೆಯನ್ನು ತಿರುಚಿ ಶಾಂತಿ ಕದಡುವಂತೆ ಮಾಡುತ್ತಾರೆ. ಅಲ್ಲದೇ, ಡೀಪ್ಫೇಕ್ ಎಂಬ ತಂತ್ರಜ್ಞಾನ ಬಳಸಿಕೊಂಡು ಮಹಿಳೆಯರ ಮಾನ ಕಳೆಯುವ ಪ್ರಕರಣಗಳು ನಡೆಯುತ್ತಿರುವ ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸುವುದು ಬೇಡ. ಈ ರೀತಿಯ ದೂರುಗಳು ಬಂದಾಗ ಕೂಡಲೇ ಎಫ್ಐಆರ್ ದಾಖಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದ ಪ್ರಮುಖ ನಗರಗಳಲ್ಲಿ ಸೈಬರ್ ಕ್ರೈಂ ಚಟುವಟಿಕೆ ಹೆಚ್ಚಾಗುತ್ತಿವೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ಮಟ್ಟ ಹಾಕಬೇಕು. ತಾಂತ್ರಿಕ ಪದವಿಧರ ಸಿಬ್ಬಂದಿಯನ್ನು ಗುರುತಿಸಿ ಜವಾಬ್ದಾರಿ ನೀಡಬೇಕು. ಸೈಬರ್ ಕ್ರೈಂ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಹೆಚ್ಚು ಅಪಘಾತಗಳು ಸಂಭವಿಸುವ (ಬ್ಲಾಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಿ, ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬೇಕು. ರಸ್ತೆಗಳಲ್ಲಿ ಸೂಚನಾಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಬೇಕು. ಹೈವೆ ಪ್ಯಾಟ್ರೋಲಿಂಗ್ ಅಚ್ಚುಕಟ್ಟಾಗಿ ನಡೆಸಬೇಕು. ಪ್ರತಿ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ಶಾಂತಿ ಸುವಸ್ಥೆ ಕಾಪಾಡಲು ಒಬ್ಬರು, ಅಪರಾಧ ವಿಭಾಗಕ್ಕೆ ಮೊತ್ತಬ್ಬರು ಎಎಸ್ಪಿಯನ್ನು ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಡಿಐಜಿ ತ್ಯಾಗರಾಜನ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...