
ಲೀನಾ ಮಣಿಮೇಖಲೈ ಹೊಸ ಚಿತ್ರ ʼಕಾಳಿ’ ಗಾಗಿ ಪೋಸ್ಟರ್ ಬಹಿರಂಗಪಡಿಸುತ್ತಿರುವಂತೆ ವಿವಾದ ಉಂಟಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್ ಸಹ ದಾಖಲಿಸಿದ್ದಾರೆ.
ಕಾಳಿ ಮಾತೆ ಧೂಮಪಾನ ಮಾಡುವ ಪೋಸ್ಟ್ ವಿವಾದ ಸುಂಟರಗಾಳಿ ಎಬ್ಬಿಸಿದ್ದು, ಕಾಳಿ ತನ್ನ ಕೈಯಲ್ಲಿ ಕಾಮನಬಿಲ್ಲಿನ ಧ್ವಜವನ್ನು ಹಿಡಿದಿದ್ದಾಳೆ. ಅದು- ಜಾಗತಿಕವಾಗಿ ಗುರುತಿಸಲ್ಪಟ್ಟ ಸಲಿಂಗಕಾಮಿ, ದ್ವಿಲಿಂಗಿಯ ಸಂಕೇತವಾಗಿ ಪರಿಗಣಿತವಾಗಿದೆ.
ಇದೀಗ ಚಿತ್ರದ ನಿರ್ಮಾಪಕಿ, ನಿರ್ದೇಶಕಿ ಪರವಾಗಿ ತೃಣ ಮೂಲಕಾಂಗ್ರೆಸ್ ನಾಯಕಿ ದನಿ ಎತ್ತಿದ್ದು, “ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳಲು ನಿಮಗೆ ಸ್ವಾತಂತ್ರ್ಯವಿದೆ’ ಎಂದು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮೊಯಿತ್ರಾ ಹೇಳಿದ್ದಾರೆ.
“ನನ್ನ ಪಾಲಿಗೆ ಕಾಳಿಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆ’ ಎಂದು ಅವರು ಹೇಳಿದ್ದು, “ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಅದು ಧರ್ಮ ನಿಂದೆಯಾಗಿರುತ್ತದೆ’ ಎಂದು ವೈವಿಧ್ಯತೆಯ ಪಾಠ ಮಾಡಿದ್ದಾರೆ.
ಮಣಿಮೇಕಲೈ ತಮ್ಮ ಪೋಸ್ಟರ್ ಅನ್ನು ಸರ್ಮಥಿಸಿಕೊಂಡಿದ್ದಾರೆ. ನನಗೆ ಕಳೆದುಕೊಳ್ಳಲು ಏನೂ ಇಲ್ಲ, ಬದುಕಿರುವವರೆಗೂ ನಾನು ನಂಬಿದ್ದನ್ನು ನಿರ್ಭಯವಾಗಿ ಮಾತನಾಡುವ ಧ್ವನಿಯೊಂದಿಗೆ ಬದುಕಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸೋಮವಾರ ಉತ್ತರ ಪ್ರದೇಶ ಪೊಲೀಸರು ಮಣಿಮೇಖಲೈ ಮತ್ತು ಚಿತ್ರದಲ್ಲಿ ಕೆಲಸ ಮಾಡಿದ ಇತರ ಇಬ್ಬರ ವಿರುದ್ಧ ‘ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳದಲ್ಲಿ ಅಪರಾಧ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು (ಮತ್ತು) ಶಾಂತಿ ಭಂಗ ಪ್ರಚೋದಿಸುವ ಉದ್ದೇಶದ’ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣವನ್ನೂ ದಾಖಲಿಸಿದ್ದಾರೆ.