ಕಳೆದ ವರ್ಷ ಕೋವಿಡ್ 19 ಬಂದು ಅಪ್ಪಳಿಸಿದಾಗಿನಿಂದ ಜನರ ಜೀವನೇ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಸಂಕಷ್ಟದ ನಡುವೆಯೂ ಪ್ರಾಣದ ಹಂಗನ್ನು ತೊರೆದು ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೆಲಸಗಾರರು ಜನರ ಸೇವೆಯನ್ನು ಮಾಡುತ್ತಲೇ ಬರ್ತಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಇನ್ನೊಬ್ಬರ ಜೀವವನ್ನು ಉಳಿಸುವ ಸಲುವಾಗಿ ಹಗಲಿರುಳೆನ್ನದೇ ದುಡಿದಿದ್ದಾರೆ. ಇದೇ ಸಾಲಿಗೆ ಪಶ್ಚಿಮ ಬಂಗಾಳದ ದುಬ್ರಾಜಪುರ ಆರೋಗ್ಯ ಕಾರ್ಯಕರ್ತೆ ಬಿರ್ಭುಮ್ ಕೂಡ ಸೇರಿದ್ದಾರೆ.
ರೋಗಿಗಳ ಶುಶ್ರೂಷೆ ಮಾಡುವ ವೇಳೆಯಲ್ಲಿ ಬಿರ್ಭುಮ್ ಕೂಡ ಕೋವಿಡ್ 19 ಸೋಂಕಿಗೆ ತುತ್ತಾದರು. ಅವರನ್ನು ರಾಮಪುರ್ಹತ್ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಲಾಯ್ತು. ಸೋಂಕಿನ ವಿರುದ್ಧ ಸಾಕಷ್ಟು ಹೋರಾಡಿದ ಬಿರ್ಭುಮ್ ಮೇ 4ರಂದು ಮೃತಪಟ್ಟರು. ಸಾವಿಗೂ ಮುನ್ನ ತಮ್ಮ ಪುತ್ರ ಹಾಗೂ ಪತಿಯ ಮುಂದೆ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು.
ತಮ್ಮ ಪಿಂಚಣಿ ಹಣದಿಂದ ಆ್ಯಂಬುಲೆನ್ಸ್ ಖರೀದಿ ಮಾಡಬೇಕು. ಹಾಗೂ ಈ ಆ್ಯಂಬುಲೆನ್ಸ್ನ್ನು ಸೂರಿ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಬೇಕು ಎಂದು ಹೇಳಿದ್ದರು. ಇದೇ ಆಸೆಯಂತೆ ತಂದೆ ಹಾಗೂ ಮಗ ಆಸ್ಪತ್ರೆಗೆ ಆ್ಯಂಬುಲೆನ್ಸ್ನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ್ಯಂಬುಲೆನ್ಸ್ ಕೊರತೆಯಿಂದಾಗಿ ಯಾವುದೇ ರೋಗಿ ಸಾವಿಗೀಡಾಗಬಾರದು ಎಂಬುದು ಮೃತ ಬಿರ್ಭುಮ್ರ ಆಸೆಯಾಗಿತ್ತು.
ಈ ವಿಚಾರವಾಗಿ ಮಾತನಾಡಿದ ಪುತ್ರ ಆರಿತ್ರಿಕ್ ಬ್ಯಾನರ್ಜಿ, ನನ್ನ ತಾಯಿ ಎಂದಿಗೂ ಜನರಿಗೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದರು. ನನ್ನ ತಾಯಿಯ ಕೊನೆಯ ಆಸೆಯಂತೆ ಹವಾನಿಯಂತ್ರಿತ ಆ್ಯಂಬುಲೆನ್ಸ್ನ್ನು ಆಸ್ಪತ್ರೆಗೆ ನೀಡಿದ್ದೇವೆ ಎಂದು ಹೇಳಿದರು.