ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಆಕೆಯ ಪತಿ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಹೋಗಿ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
27 ವರ್ಷದ ಲೋಕ ನಾಯಕಿ ಮೃತಪಟ್ಟ ಮಹಿಳೆಯಾಗಿದ್ದು, ಆರೋಪಿ ಪತಿ ಮಾದೇಶ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 22 ರಂದು ಕೃಷ್ಣಗಿರಿಯ ತಮ್ಮ ನಿವಾಸದಲ್ಲಿ ಲೋಕನಾಯಕಿ ಗಂಡು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ.
ಪೋಚಂಪಲ್ಲಿಯ ಪುಲಿಯಂಪಟ್ಟಿ ಗ್ರಾಮದ ಲೋಕನಾಯಕಿ 2021ರಲ್ಲಿ ಧರ್ಮಪುರಿ ಜಿಲ್ಲೆ ಅನುಮಪುರ ಗ್ರಾಮದ ಮಾದೇಶನನ್ನು ಮದುವೆಯಾಗಿದ್ದರು. ಪತ್ನಿಯನ್ನು ವೈದ್ಯಕೀಯ ಚಿಕಿತ್ಸೆಯಿಂದ ದೂರವಿರಿಸಿದ್ದ ಮಾದೇಶ ಪ್ರಾಕೃತಿಕ ಚಿಕಿತ್ಸೆ ನೀಡಲು ಮುಂದಾಗಿದ್ದ. ಪತ್ನಿ ಗರ್ಭಿಣಿಯಾದಾಗ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಅವಕಾಶ ನೀಡಿರಲಿಲ್ಲ.
ವೈದ್ಯರ ಸಲಹೆಯಂತೆ ಔಷಧ, ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ವೈದ್ಯರು ಸೂಚಿಸಿದ ಆಹಾರ ಕೊಡದೆ ಪತ್ನಿಗೆ ಸೊಪ್ಪು ಇತರೆ ನೈಸರ್ಗಿಕ ಆಹಾರ ಮಾತ್ರ ಕೊಡುತ್ತಿದ್ದ. ಇದರಿಂದಾಗಿ ಆಕೆಯ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮಾದೇಶ ನಂಬಿದ್ದ. ಆಗಸ್ಟ್ 22ರಂದು ಬೆಳಗ್ಗೆ 4 ಗಂಟೆ ವೇಳೆಗೆ ಲೋಕನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮಾದೇಶ ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ. ಆದರೆ ಅದು ಸಾಧ್ಯವಾಗದೆ ಲೋಕನಾಯಕಿಗೆ ತೀವ್ರ ಅಸ್ವಸ್ಥಗೊಂಡಿದ್ದು, ನಂತರ ಪೂಚಂಪಲ್ಲಿಯ ಕುನ್ನಿಯೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದು, ಮಾರ್ಗಮಧ್ಯದಲ್ಲೇ ಲೋಕನಾಯಕಿ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಮಾದೇಶ್ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಮುಂದಾಗಿದ್ದು, ಸಾವಿಗೆ ಕಾರಣವೆಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.