ಕಡಲೂರು(ತಮಿಳುನಾಡು): ತಮಿಳುನಾಡಿನ ಕಡಲೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹನ್ನೊಂದನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಾಲೆ ಬಳಿಯ ಪೊದೆಯಲ್ಲಿ ನವಜಾತ ಶಿಶು ಎಸೆದು ಹೋಗಿದ್ದಾಳೆ. ತಮಿಳುನಾಡಿನ ಕಡಲೂರಿನಲ್ಲಿ ಘಟನೆ ನಡೆದಿದೆ.
ಮತ್ತೊಂದೆಡೆ 16 ವರ್ಷದ ಬಾಲಕಿ ಗರ್ಭಧರಿಸಲು ಕಾರಣನಾದ ಹತ್ತನೇ ತರಗತಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಪೊದೆಯಲ್ಲಿ ನವಜಾತ ಶಿಶುವಿನ ಶವವನ್ನು ಕಂಡು ಸಹಾಯಕ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ, ಪೊಲೀಸ್ ತಂಡ ಶಾಲೆಗೆ ಧಾವಿಸಿ, ಮೃತ ಮಗು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಚಿದಂಬರಂನ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ವಿಶ್ರಾಂತಿ ಕೊಠಡಿಯಲ್ಲಿ ಮಗುವಿಗೆ ಜನ್ಮ ನೀಡಿ ಪೊದೆಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿ ತನಿಖೆ ಕೈಗೊಂಡಿದ್ದಾರೆ. ತನಿಖೆಯ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿ ಪೊದೆಗಳಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ಗೆಳೆಯ ತನ್ನ ಗರ್ಭಕ್ಕೆ ಕಾರಣ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಬಾಲಕನ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಬಾಲಕನನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ನಂತರ ಆತನನ್ನು ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಕಾಮರಾಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.