ಕೊಲ್ಕತ್ತಾ: ಕೇಂದ್ರ ಸರ್ಕಾರದ ಆದೇಶ ಅನುಸರಿಸಿ ಪಶ್ಚಿಮಬಂಗಾಳ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಡೆಪ್ಯೂಟೇಷನ್ ಗೆ ಬಿಡುಗಡೆ ಮಾಡುವುದಿಲ್ಲ ಎಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹೇಳಿದೆ.
ಬೇಕಾದರೆ ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಲಿ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಲಾಗಿದೆ. ಟಿಎಂಸಿ ಹಿರಿಯ ಮುಖಂಡ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಸುಬ್ರತಾ ಮುಖರ್ಜಿ ಈ ಬಗ್ಗೆ ಮಾತನಾಡಿ, ಕೇಂದ್ರದ ಆದೇಶ ಅಸಂವಿಧಾನಿಕವಾಗಿದೆ. ಅದು ಸ್ವೀಕಾರಾರ್ಹವಲ್ಲ. ರಾಜ್ಯದಲ್ಲಿ ಅವರು ರಾಷ್ಟ್ರಪತಿಗಳ ಆಡಳಿತ ಹೇರಲು ಹವಣಿಸುತ್ತಿದ್ದಾರೆ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರುವುದಾದರೆ ಹೇರಲಿ ಎಂದು ಹೇಳಿದ್ದಾರೆ.
ನಮ್ಮ ಅಧಿಕಾರಿಗಳನ್ನು ಡೆಪ್ಯೂಟೇಷನ್ ಗೆ ಕಳುಹಿಸುವುದಿಲ್ಲ. ಇದರಿಂದ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರಬಹುದು. ಅದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಅಧಿಕಾರ ಬಳಸಿಕೊಂಡು ಬೇಕಾದರೆ ಮುಂದುವರೆಯಲಿ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಸರಿ ಪಕ್ಷದ ನಾಯಕರು ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಬಂಗಾಳದ ಎಡಿಜಿಪಿ ರಾಜೀವ್ ಮಿಶ್ರಾ, ಪ್ರೆಸಿಡೆನ್ಸಿ ರೇಂಜ್ ಡಿಐಜಿ ಪ್ರವೀಣ್ ತ್ರಿಪಾಠಿ ಮತ್ತು ಡೈಮಂಡ್ ಹಾರ್ಬರ್ ನ ಪೊಲೀಸ್ ಅಧೀಕ್ಷಕ ಭೋಲನಾಥ್ ಪಾಂಡೆ ಅವರನ್ನು ಕ್ರಮವಾಗಿ ಐಟಿಬಿಪಿ, ಸೀಮಾ ಸುರಕ್ಷಾ ಬಲ ಮತ್ತು ಪೋಲಿಸ್ ಸಂಶೋಧನಾ ಬ್ಯುರೋಗೆ ಡೆಪ್ಯುಟೇಷನ್ ಮೇಲೆ ಕೇಂದ್ರ ಸರ್ಕಾರದ ಮೇಲೆ ಕಳುಹಿಸಿದೆ. ಆದರೆ, ಇದಕ್ಕೆ ಪಶ್ಚಿಮಬಂಗಾಳ ಸರ್ಕಾರ ಆಕ್ಷೇಪಿಸಿದ್ದು, ಇದು ಅಸಂವಿಧಾನಿಕವಾಗಿದೆ. ಕೇಂದ್ರದ ಹಸ್ತಕ್ಷೇಪವನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದೆ.
1954 ರ ಐಪಿಎಸ್ ಕೇಡರ್ ನಿಯಮದ ಕೆಲವು ನಿಬಂಧನೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ದೇಶದ ಫೆಡರಲ್ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದೆ ಎಂದು ಸುಬ್ರತಾ ಮುಖರ್ಜಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಪೊಲೀಸ್ ಪಡೆಯನ್ನು ಕೆಳಮಟ್ಟಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ ಎಂದು ಕೂಡ ಅವರು ಟೀಕಿಸಿದ್ದಾರೆ.