ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೆಟ್ಟಹತ್ತಿ ಹೋಗುವ ಭಕ್ತರಿಗೆ ಆತಂಕ ಎದುರಾಗಿದ್ದು, ತಿರುಮಲ ಅಲಿಪಿರಿ ವಾಕ್ ವೇನಲ್ಲಿ ಪದೇ ಪದೇ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಜನರಲ್ಲಿ ಭಯ-ಭೀತಿ ಹುಟ್ಟಿಸಿದೆ. ಇದೀಗ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ಚಿರತೆ ಸೆರೆ ಹಿಡಿಯಲಾಗಿದೆ.
ಎರಡು ತಿಂಗಳ ಹಿಂದೆ ಕೌಶಿಕ್ ಎಂಬ ಬಾಲಕನ ಮೇಲೆ ದಾಳಿ ನಡೆಸಿದ್ದ ಜಾಗದಲ್ಲಿಯೇ ಈ ಚಿರತೆ ಸಿಕ್ಕಿಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಈ ಮೂಲಕ ತಿರುಪತಿ ತಿರುಮಲ ಬೆಟದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಲ್ಕನೇ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ತಿರುಮಲದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಅಲಿಪಿರಿ ಪಾದಚಾರಿ ಮಾರ್ಗದ ಮೂಲಕ ಮೆಟ್ಟಿಲು ಹತ್ತಿ ಹೋಗುತ್ತಿದ್ದ ಕುಟುಂಬದ ಮೇಲೆ ಚಿರತೆ ದಾಳಿ ನಡೆಸಿ, 6 ವರ್ಷದ ಬಾಲಕಿಯನ್ನು ಹೊತ್ತೊಯ್ದಿತ್ತು. ಈ ಘಟನೆ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿತ್ತು. ಇದಾದ ಕೆಲ ದಿನಗಳಲ್ಲೇ ಅಲಿಪಿರಿ ಪಾದಚಾರಿ ಮಾರ್ಗದಲ್ಲೇ ಮತ್ತೆರಡು ಚಿರತೆಗಳು, ಕರಡಿ ಪ್ರತ್ಯಕ್ಷವಾಗಿ ಭಕ್ತರಲ್ಲಿ ಆತಂಕ ಹುಟ್ಟಿಸಿತ್ತು. ಈವರೆಗಿನ ಆಪರೇಷನ್ ಚಿರತೆ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ಕು ಚಿರತೆಗಳನ್ನು ಸೆರೆ ಹಿಡಿಯುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.