ತಿರುಪತಿ: ತಿರುಪತಿ ಬೆಟ್ಟದಲ್ಲಿ ಚಿರತೆ ಕಾಟದಿಂದಾಗಿ ಭಕ್ತರು ಬೆಟ್ಟ ಹತ್ತಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಮತ್ತೊಂದು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ತಿರುಪತಿ ಬೆಟ್ಟದ ಕಾಲ್ನಡಿಗೆ ಮಾರ್ಗದ 2,850ನೇ ಮೆಟ್ಟಿಲುಗಳ ಬಳಿ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಸಧ್ಯ ಚಿರತೆ ಈ ಬೋನ್ ಗೆ ಬಿದ್ದಿದೆ. ಈ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಒಟ್ಟು 6 ಚಿರತೆಗಳನ್ನು ಸೆರೆ ಹಿಡಿದಂತಾಗಿದೆ.
ಕೆಲ ತಿಂಗಳ ಹಿಂದೆ ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ 6 ವರ್ಷದ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದಳು. ಈ ಘಟನೆ ಬಳಿಕ ಅಲಿಪಿರಿ ಬಳಿ ಪಾದಚಾರಿ ಮಾರ್ಗದಲ್ಲಿ ಹಲವು ಚಿರತೆ, ಕರಡಿ ಪ್ರತ್ಯಕ್ಷವಾಗಿ ಭಕ್ತರನ್ನು ಭಯಭೀತರನ್ನಾಗಿಸಿತ್ತು.
ಅರಣ್ಯ ಇಲಖೆ ಸಿಬ್ಬಂದಿ ಬೆಟ್ಟದ ಮೆಟ್ಟಿಲುಗಳ ಬಳಿ, ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಬೋನುಗಳನ್ನು ಇಟ್ಟು ಒನ್ನೊಂದು ಚಿರತೆ ಸೆರೆ ಹಿಡಿಯುವಷ್ಟರಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸುತ್ತಿತ್ತು. ಇದೀಗ 6ನೇ ಚಿರತೆಯನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದು, ಭಕ್ತರು, ಸಿಬ್ಬಂದಿಗಳು ಕೊಂಚ ನಿರಾಳರಾಗಿದ್ದಾರೆ.