ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ದರ್ಶನದ ಸಮಯ ಹೆಚ್ಚಾಗಿದೆ. ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 40 ಗಂಟೆಗಳ ಕಾಲ ಸರದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶೇಷ ದರ್ಶನಕ್ಕೂ ಕನಿಷ್ಠ ನಾಲ್ಕು ಗಂಟೆ ಕಾಯುವಂತಾಗಿದೆ. ಶನಿವಾರ 57,104 ಭಕ್ತರು ಆಗಮಿಸಿದ್ದು, 32,351 ಜನ ಮುಡಿ ಅರ್ಪಿಸಿದ್ದಾರೆ. ಶನಿವಾರ ಒಂದೇ ದಿನ ಟಿಟಿಡಿಗೆ 4.66 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಬೆಟ್ಟದ ಮೇಲೆ ಮಳೆ ಸುರಿಯುತ್ತಿದ್ದು, ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಇತ್ತೀಚೆಗೆ ದೀಪಾವಳಿ, ದಸರಾ ರಜೆ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಮೂರು ದಿನ ಕಾಯಬೇಕಾಗಿತ್ತು. ಈಗ ಕನಿಷ್ಠ 40 ಗಂಟೆಗಳ ಕಾಲ ದರ್ಶನಕ್ಕೆ ಕಾಯುವ ಪರಿಸ್ಥಿತಿ ಎದುರಾಗಿದೆ.