ಬೆಂಗಳೂರು: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕದ ಭಕ್ತರಿಗೆ ತಂಗಲು ಅನುಕೂಲವಾಗುವಂತೆ ವಸತಿಗೃಹಗಳ ಸಮುಚ್ಚಯದ ಮೊದಲ ಹಂತದ ಬ್ಲಾಕ್ 2ರಲ್ಲಿ 176 ಕೊಠಡಿಗಳನ್ನು ಉದ್ಘಾಟಿಸಲಾಗಿದೆ.
ಶೇಕಡ 60ರಷ್ಟು ಕೊಠಡಿಗಳನ್ನು ಆನ್ಲೈನ್ ಬುಕಿಂಗ್ ಗೆ ಸೀಮಿತಗೊಳಿಸಿದ್ದು, ಉಳಿದ ಶೇಕಡ 40ರಷ್ಟು ಕೊಠಡಿಗಳನ್ನು ಆಫ್ ಲೈನ್ ಮೂಲಕ ಭಕ್ತರಿಗೆ ನೀಡಲಾಗುತ್ತದೆ. ರಾಜ್ಯದ ಭಕ್ತರಿಗೆ ತಂಗಲು ಅನುಕೂಲವಾಗುವಂತೆ ನಾಲ್ಕು ಬ್ಲಾಕ್ ಗಳಲ್ಲಿ ಕೊಠಡಿಗಳ ನಿರ್ಮಾಣ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗಿದೆ. ಇತ್ತೀಚೆಗೆ ಎರಡನೇ ಬ್ಲಾಕ್ ನಲ್ಲಿ 112 ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಹೋಮ ನೆರವೇರಿಸಲಾಗಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಟಿಟಿಡಿ ಸದಸ್ಯರಾದ ಶಾಸಕ ಎಸ್. ಆರ್. ವಿಶ್ವನಾಥ್, ಮುಜರಾಯಿ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಭಾಗವಹಿಸಿದ್ದರು. ಭಕ್ತರ ಬಳಕೆಗೆ ಈ ಕೊಠಡಿಗಳು ಶೀಘ್ರವೇ ದೊರೆಯಲಿದ್ದು, ಆನ್ಲೈನ್ ಮೂಲಕ ಬುಕಿಂಗ್ ಗೆ ಅವಕಾಶ ನೀಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹೆಚ್. ಬಸವರಾಜೇಂದ್ರ ತಿಳಿಸಿದ್ದಾರೆ.