ವಿಜಯಪುರ: ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದು, ಇದು ಸನಾತನ ಧರ್ಮ ನಿರ್ಮೂಲನೆಗೆ ನಡೆದಿರುವ ವ್ಯವಸ್ಥಿತ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬು, ಕಲಬೆರಿಕೆ ತುಪ್ಪ ಪೂರೈಕೆಯಾಗಿದೆ. ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು. ಇದು ಸನಾತನ ಧರ್ಮ ನಿರ್ಮೂಲನೆಗೆ ನಡೆಸಿರುವ ವ್ಯವಸ್ಥಿತ ಸಂಚು. ಜಗನ್ ಮೋಹನ್ ರೆಡ್ಡಿ ಹಿಂದೂವಲ್ಲ ಕನ್ ವರ್ಟಡ್ ಕ್ರಿಶ್ಚಿಯನ್ ಎಂದು ಕಿಡಿಕಾರಿದ್ದಾರೆ.
ಕೋಟ್ಯಂತರ ಭಕ್ತರು ತಿರುಪತಿ ಬಾಲಾಜಿಗೆ ನಡೆದುಕೊಳ್ಳುತ್ತಾರೆ. ಇದು ರಾಜಕೀಯ ಟೀಕೆಯಲ್ಲ, ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ಟೆಸ್ಟ್ ನಲ್ಲಿ ದೃಢಪಟ್ಟಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದಿರುವುದು ಆಘಾತ ತಂದಿದೆ. ತಪ್ಪು ಮಾಡಿರುವವರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ತಿರುಪತಿ ಸುತ್ತಮುತ್ತ ಚರ್ಚ್ ಗಳನ್ನು ನಿರ್ಮಿಸಲಾಗಿದೆ. ತಿರುಪತಿ ದೇಗುಲದ ಆಡಳಿತ ಮಂಡಳಿ ಹಿಂದೂಗಳ ಕೈಯಲ್ಲಿರಬೇಕು. ಆದರೆ ಜಗನ್ ರೆಡ್ಡಿ ಚಿಕ್ಕಪ್ಪನ ಕೈಯಲ್ಲಿ ಅಲ್ಲಿನ ಅಧಿಕಾರವಿರುವುದು ಇಂತಹ ಘಟನೆ ನಡೆಯಲು ಕಾರಣವಾಗಿದೆ. ಮೊದಲು ಇಡೀ ತಿರುಪತಿ ದೇವಸ್ಥಾನ ಶುದ್ಧಿಗೊಳಿಸಬೇಕು. ಸನಾತನ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿ ಮೋಸ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.