ತಿರುಮಲ: ತಿರುಪತಿ ಲಡ್ಡು ಪ್ರಸಾದದಲ್ಲಿ ದೊಡ್ಡ ಪ್ರಮಾದವೇ ಆಗಿದ್ದು, ಕಲಬೆರಕೆ ತುಪ್ಪ, ಕೊಬ್ಬುಗಳನ್ನು ಬಳಸಿರುವುದು ನಿಜ ಎಂಬುದನ್ನು ಸ್ವತಃ ಟಿಟಿಡಿ ಕೂಡ ಒಪ್ಪಿಕೊಂಡಿದೆ. ನಿಜಕ್ಕೂ ಇದು ಕೋಟಿ ಕೋಟಿ ಭಕ್ತರಿಗೆ ಮನಸ್ಸಿಗೆ ಆಘಾತವನ್ನುಂಟುಮಾಡಿದೆ.
ತಿರುಮಲದಲ್ಲಿ ಸುದ್ದಿಗೋಷ್ಠಿ ನಡೆಸಿದ ಟಿಟಿಡಿ ಎಕ್ಸಿಕುಟೀವ್ ಆಫೀಸರ್ ಶ್ಯಾಮಲ್ ರಾವ್, ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕೊಬ್ಬು ಬಳಕೆಯಾಗಿದ್ದು ನಿಜ. ಲಡ್ಡುಗೆ ಪೂರೈಕೆಯಾಗಿದ್ದ ತುಪ್ಪ ಅತ್ಯಂತ ಕಲಬೆರಿಕೆಯಾಗಿತ್ತು. ಸರ್ಕಾರಿ ಲ್ಯಾಬ್ ಗಳಲ್ಲಿ ನಾವು ಪರೀಕ್ಷೆ ಮಾಡಿಸಿದ್ದೆವು. ಲ್ಯಾಬ್ ವರದಿಯನ್ನು ನೋಡಿದಾಗ ಮನಗೆ ಆಘಾತವಾಗಿತ್ತು ಎಂದು ತಿಳಿಸಿದ್ದಾರೆ.
ಲ್ಯಾಬ್ ವರದಿಯಲ್ಲಿ ಅದು ಕಲಬೆರಿಕೆ ತುಪ್ಪ ಎಂಬುದು ದೃಢಪಟ್ಟಿದೆ. ಗುಜರಾತ್ ನ ಎನ್ ಡಿಡಿಬಿ ಸಿಎ ಎಲ್ ಎಫ್ ಲ್ಯಾಬ್ ನ ವರದಿ ಪ್ರಕಾರ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಇರುವುದು ದೃಢಪಟ್ಟಿದೆ. ತುಪ್ಪ ಪೂರೈಸಿದ ಎಆರ್ ಡೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಿಟಿಡಿ ಬಳಿ ಲ್ಯಾಬ್ ಇಲ್ಲದಿರುವುದರಿಂದ ಈ ಹಿಂದೆ ಟೆಸ್ಟ್ ಮಾಡಿರಲಿಲ್ಲ. ಆದರೆ ಈಗ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಲಾಗಿದ್ದು, 20.32ರಷ್ಟು ಕಲಬೆರಿಕೆ ತುಪ್ಪ ಇರುವುದು ದೃಢವಾಗಿದೆ. ಈ ಹಿಂದಿನ ಸರ್ಕಾರ ತುಪ್ಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.