ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಿಕೆ ತುಪ್ಪ ಬಳಕೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಸರ್ಕಾರ ರಾಜ್ಯದ ದೇವಾಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆ ಹಾಗೂ ದೇವಾಲಯಗಳ ಪ್ರಸಾದ ಪರೀಕ್ಷೆಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ರಾಜ್ಯದ ವಿವಿಧ ಕಂಪನಿಗಳಲ್ಲಿ ತಯಾರಾಗುವ ತುಪ್ಪದ ಗುಣಮಟ್ಟ ಪರೀಕ್ಷೆಗೂ ನಿರ್ಧರಿಸಿದೆ.
ರಾಜ್ಯದಲ್ಲಿ ತಯಾರಾಗುವ ಹಾಗೂ ಮಾರಾಟವಾಗುವ ವಿವಿಧ ಕಂಪನಿಗಳ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಆಹಾರ ಸಚಿವ ದಿನೇಶ್ ಗುಂಡೂರಾವ್ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶ ನೀಡಿದ್ದಾರೆ.
ತ್ವರಿತವಾಗಿ ವಿವಿಧ ಕಂಪನಿಗಳ ತುಪ್ಪದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಿಕೆ ಕಂಡುಬಂದಲ್ಲಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ತಯಾರಿಸುವ ಪ್ರಸಾದಗಳ ಪರೀಕ್ಷೆಗೂ ಅಧಿಕಾರಿಗಳು ಮುಂದಾಗಿದ್ದಾರೆ.