ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬ ವಿವಾದವು ಉಲ್ಬಣಗೊಳ್ಳುತ್ತಲೇ ಇದೆ. ಪ್ರಸಿದ್ಧ ‘ಪ್ರಸಾದ’ದಲ್ಲಿ ಪ್ರಾಣಿಗಳ ಕೊಬ್ಬಿದೆ ಎಂದು ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೊಸ ನಿರ್ದೇಶನ ನೀಡಿದ್ದಾರೆ. ಸೆಪ್ಟೆಂಬರ್ 23ರಂದು ದೇವಸ್ಥಾನದಲ್ಲಿ ‘ಶುದ್ಧೀಕರಣ ಪೂಜೆ’ ನಡೆಯಲಿದೆ ಎಂದು ಅವರು ಪ್ರಕಟಿಸಿದ್ದಾರೆ.
ಆಗಮ ಶಾಸ್ತ್ರ ಸಲಹೆಗಾರರೊಂದಿಗೆ ಮುಖ್ಯಮಂತ್ರಿಯವರ ಸಮಾಲೋಚನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ದೇವಸ್ಥಾನದಲ್ಲಿ ಶಾಂತಿ ಹೋಮ ನಡೆಯಲಿದ್ದು, ನಂತರ ಪಂಚಗವ್ಯಂ ಬಳಸಿ ಶುದ್ಧೀಕರಣ ಪ್ರಕ್ರಿಯೆ ನಡೆಯಲಿದೆ.
ಸೋಮವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಶ್ರೀವಾರಿ(ಶ್ರೀ ವೆಂಕಟೇಶ್ವರ) ದೇವಸ್ಥಾನದ ಬಂಗಾರು ಬಾವಿ(ಚಿನ್ನದ ಬಾವಿ) ಯಾಗಶಾಲೆಯಲ್ಲಿ ಸಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಎಸ್‌ಐಟಿ ರಚನೆ
ಘಟನೆಯ ತನಿಖೆಗಾಗಿ ಎಸ್‌ಐಟಿ ರಚನೆಯನ್ನು ಸಿಎಂ ನಾಯ್ಡು ಘೋಷಿಸಿದ್ದಾರೆ. ಉಂಡವಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಬಹಿರಂಗವಾದ ನಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ಐಜಿ ಮಟ್ಟದ ಅಥವಾ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿ-ತಂಡದ ಎಸ್‌ಐಟಿ ರಚಿಸಲಾಗುವುದು. ಇದು ಎಲ್ಲಾ ಕಾರಣಗಳು ಮತ್ತು ಅಧಿಕಾರದ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಮಾಡುತ್ತದೆ. ಲಡ್ಡು ಕಲಬೆರಕೆ ತಪ್ಪಿಸಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಜನರ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.