ತಿರುಪತಿ: ಗರ್ಭಗುಡಿ ಮೇಲಿನ ಗೋಪುರದ ಚಿನ್ನದ ಲೇಪನ ಕಾರ್ಯ ಕೈಗೊಳ್ಳುವುದರಿಂದ ಎಂಟು ತಿಂಗಳ ಕಾಲ ತಿರುಪತಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಬಂದ್ ಆಗಲಿದೆ. ತಾತ್ಕಾಲಿಕವಾಗಿ ಗರ್ಭಗುಡಿ ನಿರ್ಮಿಸಿ ಭಕ್ತರಿಗೆ ದರ್ಶನ ಕಲ್ಪಿಸಲು ಚಿಂತನೆ ನಡೆದಿದೆ.
ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಾರ್ಷಿಕ ಒಂದು ಕೋಟಿಗೂ ಅಧಿಕ ಭಕ್ತರು ಬರುತ್ತಾರೆ. ಗರ್ಭಗುಡಿಯನ್ನು ಕನಿಷ್ಠ ಆರರಿಂದ ಎಂಟು ತಿಂಗಳ ಕಾಲ ಮುಚ್ಚುವ ಸಾಧ್ಯತೆ ಇದ್ದು, ಗರ್ಭಗುಡಿಯ ಮೇಲೆ ಮೂರು ಅಂತಸ್ತಿನ ಆನಂದ ನಿಲಯಂ ಹೆಸರಿನ 37.8 ಅಡಿ ಎತ್ತರದ ವಿಮಾನ ಗೋಪುರ ಇದ್ದು, ಅದಕ್ಕೆ ಚಿನ್ನದ ಲೇಪನ ಕಾರ್ಯ ಕೈಗೊಳ್ಳುವುದರಿಂದ ಗರ್ಭಗುಡಿ ಮುಚ್ಚಲಾಗುವುದು ಎಂದು ಹೇಳಲಾಗಿದೆ.
ಮುಖ್ಯ ದೇವರ ದರ್ಶನದ ಬದಲಿಗೆ ತಾತ್ಕಾಲಿಕ ಗರ್ಭಗುಡಿ ನಿರ್ಮಿಸಿ ಅಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. 1958 ರಲ್ಲಿ ಚಿನ್ನದ ಲೇಪನ ಮಾಡಿಸಲಾಗಿತ್ತು. ಈಗ ಮತ್ತೆ ಚಿನ್ನದ ಲೇಪನ ಕಾರ್ಯ ಕೈಗೊಳ್ಳುವುದರಿಂದ ಆರರಿಂದ ಎಂಟು ತಿಂಗಳು ಸಮಯ ಬೇಕಾಗುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಗರ್ಭಗುಡಿ ನಿರ್ಮಿಸಿ ದೇವರ ವಿಗ್ರಹದ ಪ್ರತಿಕೃತಿ ಇಟ್ಟು ದರ್ಶನಕ್ಕೆ ಅವಕಾಶ ಕಲ್ಪಿಸಲಾಗದು. ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.