ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಭಾರಿ ಸಂಖ್ಯೆಯ ಭಕ್ತರು ದರ್ಶನಕ್ಕೆ ಬರುತ್ತಿರುವ ಕಾರಣ 48 ಗಂಟೆಗಳಿಗೂ ಹೆಚ್ಚು ಸಮಯ ದರ್ಶನಕ್ಕೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಶನಿವಾರ ಒಂದೇ ದಿನ 89,318 ಜನ ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಜನ ಬೆಟ್ಟದ ಮೇಲಿದ್ದು,. ಭಾರಿ ಸಂಖ್ಯೆಯ ಭಕ್ತರು ತಿರುಮಲಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬುಧವಾರದವರೆಗೆ ವಿಐಪಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ತಿರುಮಲದಲ್ಲಿ ಗಂಟೆಗೆ 4500 ಭಕ್ತರಿಗೆ ಅವಕಾಶ ಕಲ್ಪಿಸಲು ಸಾಧ್ಯವಿದೆ. ಪ್ರತಿ ಗಂಟೆಗೆ 8 ಸಾವಿರಕ್ಕೂ ಅಧಿಕ ಭಕ್ತರು ದರ್ಶನಕ್ಕಾಗಿ ಸೇರಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಹೀಗೆ ಹೀಗಿರುವುದರಿಂದ ಸದ್ಯಕ್ಕೆ ತಿರುಮಲ ಭೇಟಿಯನ್ನು ಮುಂದೂಡುವಂತೆ ಟಿಟಿಡಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಭಾರಿ ಸಂಖ್ಯೆಯ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಗುರುವಾರ ಒಂದೇ ದಿನ 5.43 ಕೋಟಿ ರೂ., ಶನಿವಾರ 3.76 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ತಿರುಮಲದಲ್ಲಿ ನಡೆಯುವ ವೈಕುಂಠ ಏಕಾದಶಿ, ಗರುಡ ಸೇವೆಯಂತಹ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ಸೇರುವ ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನ ದರ್ಶನಕ್ಕೆ ಆಗಮಿಸಿದ್ದಾರೆ. ಭಾರಿ ಸಂಖ್ಯೆಯ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನ ಪ್ರಸಾದ, ವಸತಿ, ಶೌಚಾಲಯ ಸೌಲಭ್ಯ ಕಲ್ಪಿಸುವುದು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.