ಬೆಂಗಳೂರು: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿರುಮಲದಲ್ಲಿರುವ ವಸತಿಗೃಹ ಮತ್ತು ಕಲ್ಯಾಣ ಮಂಟಪ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಭಕ್ತರ ಬಳಕೆಗೆ ಸಿಗಲಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜೇಂದ್ರ ಕುಮಾರ್ ಕಟೀರಿಯಾ, ಆಯುಕ್ತ ಬಸವರಾಜೇಂದ್ರ ಅವರು ಕರ್ನಾಟಕದ ಯಾತ್ರಿಗಳಿಗೆ ತಿರುಮಲದಲ್ಲಿ ನಿರ್ಮಿಸುತ್ತಿರುವ ವಸತಿಗೃಹ ಮತ್ತು ಕಲ್ಯಾಣ ಮಂಟಪ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ.
ತಿರುಮಲದಲ್ಲಿ ನಡೆಯುತ್ತಿರುವ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಟಿಟಿಡಿ ಅಧಿಕಾರಿ ಧರ್ಮೇಂದ್ರ ರೆಡ್ಡಿ ಕೂಡ ಭಾಗವಹಿಸಿದ್ದರು. 220 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿಗೃಹ, ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ 384 ಕೊಠಡಿಗಳ ವಸತಿಗೃಹ ಹಾಗೂ ಕಲ್ಯಾಣ ಮಂಟಪ ಕಾಮಗಾರಿ ಪೂರ್ಣವಾಗಿ ಭಕ್ತರ ಬಳಕೆಗೆ ಸಿಗಲಿದೆ.