ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ತಿರುಮಲ ಬೆಟ್ಟಗಳ ಮೇಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ 2022 ರಲ್ಲಿ 1,450 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. 2022 ರಲ್ಲಿ 2.37 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಗಳ(ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಪ್ರಕಾರ, ಕಳೆದ ವರ್ಷ 2021 ರಲ್ಲಿ 1.04 ಕೋಟಿ ಭಕ್ತರು ಭೇಟಿ ನೀಡಿದ್ದರು. 833.41 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿತ್ತು.
2022 ರಲ್ಲಿ ದೇಗುಲಕ್ಕೆ 2.37 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಹುಂಡಿ ಸಂಗ್ರಹವು 1,450.50 ಕೋಟಿ ರೂ. ಆಗಿದೆ ಎಂದು ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಟಿಟಿಡಿ ಅಧಿಕೃತ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ ತಿಂಗಳೊಂದರಲ್ಲೇ ಟಿಟಿಡಿ ಹುಂಡಿ ಸಂಗ್ರಹಕ್ಕೆ 129.37 ಕೋಟಿ ರೂಪಾಯಿ ಸಂಗ್ರಹವಾಗಿದೆ. ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 20.25 ಲಕ್ಷ ಎಂದು ಹೇಳಲಾಗಿದೆ.
ಈ ವರ್ಷ ಜನವರಿ 11 ರವರೆಗೆ 6 ಲಕ್ಷಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀವಾರಿ ಹುಂಡಿಯಲ್ಲಿ 39.40 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದಾರೆ. ಟಿಟಿಡಿ 2022 ರಲ್ಲಿ 11.54 ಲಕ್ಷ ಲಡ್ಡು ಪ್ರಸಾದವನ್ನು ಮಾರಾಟ ಮಾಡಿದೆ, ಹಿಂದಿನ ವರ್ಷದಲ್ಲಿ 5.96 ಲಕ್ಷ ಲಡ್ಡು ಮಾರಾಟ ಮಾಡಲಾಗಿತ್ತು.