ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೊ ಮಾತಿದೆ. ಆದರೆ ಇಲ್ಲೊಂದು ಸಂಸಾರದಲ್ಲಿ ಗಂಡ ಹೆಂಡತಿ ಜಗಳಕ್ಕೆ ಅಂತ್ಯವೇ ಸಿಗುತ್ತಿಲ್ಲ. ಅದಕ್ಕೆ ಪ್ರತಿನಿತ್ಯ ಹೆಂಡತಿಯೊಂದಿಗೆ ಜಗಳ ಆಡಿ ಬೇಸತ್ತ ಗಂಡ ಕೊನೆಗೆ ಮಾಡಿದ್ದು ಏನು ಗೊತ್ತಾ? ಮನೆಯ ಬಳಿಯೇ ಇರುವ ತಾಳೆಮರ ಏರಿ ಅಲ್ಲೇ ಸೆಟಲ್ ಆಗಿದ್ದಾನೆ.
ಹೀಗೆ ತಾಳೆಮರಿ ಏರಿ ಅಲ್ಲೇ ನೆಮ್ಮದಿಯಾಗಿ ದಿನ ಕಳೆಯುತ್ತಿರುವ ವ್ಯಕ್ತಿಯ ಹೆಸರು ರಾಮ್ ಆತನ ವಯಸ್ಸು 62. ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪ್‌ಗಂಜ್ ಗ್ರಾಮದ ನಿವಾಸಿಯಾಗಿರುವ ಇವರು ಕಳೆದ ಒಂದು ತಿಂಗಳಿನಿಂದ ತಾಳೆ ಮರದ ಮೇಲೆಯೇ ಬೀಡು ಬಿಟ್ಟಿದ್ಧಾರೆ. ಈಗ ಅವರು ಯಾವುದೇ ಕಾರಣಕ್ಕೂ ತಾನು ಮನೆಗೆ ಹೋಗೋಲ್ಲ ಅಂತ ಕಟ್ಟುನಿಟ್ಟಾಗಿ ಹೇಳಿದ್ಧಾನೆ. ಅದಕ್ಕೆ ಕಾರಣ ಕೂಡಾ ಇದೆ. ಅಸಲಿಗೆ ರಾಮ್ ಹೆಂಡತಿ ಪಕ್ಕಾ ಜಗಳಗಂಟಿ. ಒಂದಲ್ಲ ಒಂದು ಕಾರಣ ಇಟ್ಟು ಗಂಡನ ಜೊತೆ ಜಗಳ ಆಡೋದು, ಆತನಿಗೆ ಹೊಡೆಯೋದು ಮಾಡ್ತಾನೇ ಇರ್ತಾಳಂತೆ. ಹೆಂಡತಿಯ ಕಾಟ ತಡೆದುಕೊಳ್ಳಲಾಗದೇ ಕೊನೆಗೆ ಮರ ಏರಿ ಕೂತಿದ್ದಾನಂತೆ ಈ ಪುಣ್ಯಾತ್ಮ.
ಒಂದು ತಿಂಗಳಿನಿಂದ ಮರದ ಮೇಲೆಯೇ ವಾಸ ಅಂದ್ರೆ ಸಾಮಾನ್ಯನಾ? ಹೊಟ್ಟೆ ಹಸಿವಾದಾಗ ರಾಮ್ ಮನೆಯ ಕುಟುಂಬಸ್ಥರು ಪ್ರತಿನಿತ್ಯ ಹಗ್ಗದ ಮೂಲಕ ಆಹಾರವನ್ನ ಮರದ ಮೇಲೆಯೇ ಕಳಿಸುತ್ತಾರೆ. ಊಟ ಏನಾದರೂ ಕಳಿಸದೇ ಇದ್ದರೆ ಮರದ ಮೇಲಿಂದಾನೇ ಮನೆಯವರಿಗೆ ಹೆದರಿಸೋದು ಬೆದರಿಸೋದು ಮಾಡುತ್ತಾನೆ ಈ ಭೂಪ. ಇನ್ನೂ ಶೌಚಕ್ಕೆ ಹೋಗುವುದಾದರೆ ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಮರದಿಂದ ಇಳಿದು ಎಲ್ಲ ಕೆಲಸ ಮಗಿಸಿ ಮತ್ತೆ ಮರ ಏರಿ ಕುಳಿತುಕೊಳ್ಳುತ್ತಾನೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.
ಸದ್ಯಕ್ಕೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಗ್ರಾಮಸ್ಥರಿಗೆ ಈಗ ಹೀಗೆ ಮರ ಏರಿ ಅಲ್ಲೇ ಇರುವುದು ಸರಿ ಕಾಣುತ್ತಿಲ್ಲ. ಈ ಮರ ಸರಿಸುಮಾರು 100 ಎತ್ತರವಿದ್ದು ಅಲ್ಲಿ ಕುಳಿತಿರುವ ರಾಮ್‌ನಿಂದಾಗಿ ಬೇರೆ ಮನೆಯ ಹೆಣ್ಣುಮಕ್ಕಳಿಗೆ ಅಸಮಾಧಾನ ಉಂಟು ಮಾಡಿದೆ. ಮನೆಯ ಹೊರಗಡೆ ಬರುವುದಕ್ಕೂ ಅವರಿಗೆ ಈಗ ಮುಜುಗರವಾಗುತ್ತಿದೆ. ಆದ್ದರಿಂದ ಎಲ್ಲರೂ ರಾಮ್ ನನ್ನ ಮರದಿಂದ ಕೆಳಗೆ ಇಳಿಯಲು ವಿನಂತಿ ಮಾಡಿಕೊಂಡಿದ್ದಾರೆ.
ಆದರೆ ಆತ ಮಾತ್ರ ಎಲ್ಲರ ಮೇಲೆ ಕಲ್ಲು ಇಟ್ಟಿಗೆಯಿಂದ ದಾಳಿ ಮಾಡಿ ಯಾವುದೇ ಕಾರಣಕ್ಕೂ ತಾನು ಮರದಿಂದ ಕೆಳಗೆ ಇಳಿಯುವುದಿಲ್ಲ ಅಂತ ಹೇಳಿದ್ಧಾನೆ. ಆದ್ದರಿಂದ ಗ್ರಾಮಸ್ಥರು ಪೊಲೀಸರಿಗೆ ದೂರು ಕೊಡುವುದು ಅನಿವಾರ್ಯವಾಗಿದೆ. ಪೊಲೀಸರು ಈಗಾಗಲೇ ಬಂದು ಮರ ಏರಿ ಕೂತಿರುವ ರಾಮ್ ಅವರ ವಿಡಿಯೋ ಚಿತ್ರಿಕರಣ ಮಾಡಿಕೊಂಡು ಹೋಗಿದ್ದು, ಆತ ಮರದಿಂದ ಕೆಳಗೆ ಇಳಿಯದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ.