
ವಾಕಿಂಗ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಎರಡು ಮಾತಿಲ್ಲ. ಫಿಟ್ನೆಸ್ ಗಾಗಿ ವಾಕಿಂಗ್ ಅಭ್ಯಾಸವನ್ನು ರೂಢಿ ಮಾಡಿಕೊಂಡವರು ಅದನ್ನು ತಪ್ಪಿಸಿಕೊಳ್ಳಲು ಮನಸ್ಸು ಮಾಡೋದಿಲ್ಲ. ಪ್ರತಿ ದಿನ ವಾಕಿಂಗ್ ಮಾಡುವ ಜನರು ಚಳಿಗಾಲದಲ್ಲೂ ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಗೆ ಹೋಗ್ತಾರೆ. ಎಲ್ಲ ಕಾಲದಂತೆ ಚಳಿಗಾಲವಲ್ಲ. ಈ ಋತುವಿನಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುವವರು ಕೆಲ ಎಚ್ಚರಿಕೆ ವಹಿಸಬೇಕು. ಅದ್ರಲ್ಲೂ ಹೃದ್ರೋಗಿಗಳು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಹೃದಯ ಸಂಬಂಧಿ ಖಾಯಿಲೆ ಕಾಡೋದು ಹೆಚ್ಚು. ತಣ್ಣನೆ ಗಾಳಿ ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದ್ರಿಂದ ಹೃದಯಕ್ಕೆ ರಕ್ತ ಪಂಪ್ ಮಾಡೋದು ಕಷ್ಟವಾಗುತ್ತದೆ. ನೀವು ಹೃದ್ರೋಗಿಗಳಾಗಿದ್ದು, ಚಳಿಗಾಲದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡ್ತಿದ್ದರೆ ಈ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಬೆಚ್ಚಗಿನ ಬಟ್ಟೆ ಧರಿಸುವುದು ಬಹಳ ಮುಖ್ಯ. ಹೃದ್ರೋಗಿಗಳು ವಾಕಿಂಗ್ ಗೆ ಹೋಗುವ ಸಮಯದಲ್ಲಿ ದೇಹದ ಎಲ್ಲ ಭಾಗ ಮುಚ್ಚಿರುವಂತೆ ನೋಡಿಕೊಳ್ಳಿ. ಟೀ ಶರ್ಟ್ ಅಷ್ಟೇ ಧರಿಸಿ ವಾಕಿಂಗ್ ಹೋಗಬೇಡಿ. ಬೆಚ್ಚಗಿನ ಬಟ್ಟೆ ಧರಿಸಿ, ಇಡೀ ದೇಹ ಶೀತ ಗಾಳಿಯಿಂದ ರಕ್ಷಣೆ ಪಡೆಯುವಂತೆ ನೋಡಿಕೊಳ್ಳಿ.
ಬೆಳಿಗ್ಗೆ ವಾಕಿಂಗ್ ಹೋಗುವ ವೇಳೆ ಖಾಲಿ ಹೊಟ್ಟೆಯಲ್ಲಿ ಹೋಗಬೇಡಿ. ಸ್ವಲ್ಪ ಆಹಾರ ಸೇವನೆ ಮಾಡಿ. ನೀವು ಡ್ರೈ ಫ್ರೂಟ್ಸ್ ತಿಂದು ವಾಕಿಂಗ್ ಗೆ ಹೋಗಬಹುದು. ಸರಿಯಾದ ಪ್ರಮಾಣದಲ್ಲಿ ನೀರು ಸೇವನೆಗೆ ಆದ್ಯತೆ ನೀಡಿ.
ಬೆಳಗಿನ ಜಾವದಲ್ಲಿ ಹೃದ್ರೋಗಿಗಳು ವಾಕಿಂಗ್ ಹೋಗೋದನ್ನು ತಪ್ಪಿಸಿ. ನೀವು ಸೂರ್ಯ ಉದಯಿಸಿದ ಮೇಲೆಯೇ ವಾಕಿಂಗ್ ಗೆ ಹೋಗಬೇಕು. ಸೂರ್ಯನ ಕಿರಣಗಳು ನಿಮ್ಮ ಮೈಮೇಲೆ ಬೀಳುವುದ್ರಿಂದ ನಿಮಗೆ ಹೆಚ್ಚು ಚಳಿ ಅನುಭವ ಆಗೋದಿಲ್ಲ.
ನಿಯಮಿತವಾಗಿ ಪರೀಕ್ಷೆಗೆ ಒಳಗಾಗಿ. ಬಿಪಿ ಹೆಚ್ಚಿದ್ದರೆ ನೀವು ವಾಕಿಂಗ್ ಗೆ ಹೋಗೋದನ್ನು ತಪ್ಪಿಸಿ. ಧೂಮಪಾನ, ಮದ್ಯಪಾನದಿಂದ ದೂರವಿರುವುದಲ್ಲದೆ ನೀವು ವಾಕಿಂಗ್ ಸಮಯದಲ್ಲಿ ದೇಹವನ್ನು ಬೆಚ್ಚಗಿಡಲು ಲಘು ವ್ಯಾಯಾಮ ಮಾಡಿ.