ಉದರ ನಿಮಿತ್ತಂ ಬಹುಕೃತ ವೇಷಂ……..ಎಂಬ ಮಾತುಗಳಿವೆ. ಮನುಷ್ಯ ತನ್ನ ಹೊಟ್ಟೆ ಬಟ್ಟೆಗಾಗಿ ಹಲವು ದಾರಿಗಳನ್ನು ಹುಡುಕುತ್ತಿರುತ್ತಾನೆ. ಕೆಲವರು ಕಳ್ಳತನ ಮಾಡಲಿಕ್ಕಾಗಿಯೇ ವಿವಿಧ ವೇಷಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಸಿಕ್ಕಿ ಬಿದ್ದು ತಕ್ಕ ಶಾಸ್ತಿಯನ್ನೂ ಅನುಭವಿಸುತ್ತಾರೆ.
ಇದೇ ರೀತಿಯಲ್ಲಿ ಕುಬ್ಜ ವ್ಯಕ್ತಿಯೊಬ್ಬ ವಿದೂಷಕನಂತೆ ವೇಷ ಧರಿಸಿಕೊಂಡು ಮಹಿಳೆಯ ಬ್ಯಾಗ್ ಕದಿಯಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.
ನ್ಯೂಯಾರ್ಕ್ ನಗರದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ `ಚುಕ್ಕಿ’ ಯ ರೀತಿಯಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಪ್ರಯಾಣಿಕರಿದ್ದಲ್ಲಿಗೆ ಬಂದಿದ್ದಾನೆ. ಎಲ್ಲರೂ ಬಾಲಕ ಇರಬೇಕೆಂದು ಭಾವಿಸಿ ಎಲ್ಲರೂ ಆತನ ಕಡೆಗೆ ನೋಡುತ್ತಿದ್ದರು.
ಆದರೆ, ಆತ ಮಾಡಿದ್ದನ್ನು ಗಮನಿಸಿ ದಂಗಾಗಿ ಹೋದರು. ಅಲ್ಲಿಂದ ಇಲ್ಲಿಗೆ ಓಡಾಡುತ್ತಿದ್ದ ಆ ವ್ಯಕ್ತಿ ನೇರವಾಗಿ ಮಹಿಳೆಯ ಬಳಿ ಇದ್ದ ಬ್ಯಾಗ್ ಅನ್ನು ಕದಿಯಲು ಯತ್ನಿಸಿದ್ದಾನೆ. ಆ ಮಹಿಳೆ ಬ್ಯಾಗ್ ಕೊಡದಿದ್ದಾಗ ಬಲವಂತವಾಗಿ ಕಿತ್ತುಕೊಳ್ಳಲು ಜಗ್ಗಾಟ ನಡೆಸಿದ್ದಾನೆ. ಬ್ಯಾಗ್ ಅನ್ನು ಬಿಗಿಯಾಗಿಡಿದು ಎಳೆದಾಡಿದ್ದಾನೆ. ಆದರೆ, ಗಟ್ಟಿಗಿತ್ತಿ ಮಹಿಳೆ ಬ್ಯಾಗ್ ಅನ್ನು ಬಿಡದೇ ಆತನೊಂದಿಗೆ ಸಂಘರ್ಷಕ್ಕಿಳಿಯುತ್ತಾಳೆ. ಕಡೆಗೆ ಸಹ ಪ್ರಯಾಣಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.
ಈ ವಿಡಿಯೋ ಟ್ವಿಟರ್ ನಲ್ಲಿ ಆಪ್ಲೋಡ್ ಆಗಿದ್ದು, ವೈರಲ್ ಆಗಿದೆ.
ಬಾಲಕನ ಮಾಸ್ಕ್ ಅನ್ನು ಹೊರ ತೆಗೆದಾಗ ಆತ ಬಾಲಕನಲ್ಲ, ಮಧ್ಯ ವಯಸ್ಕ ವ್ಯಕ್ತಿಯಾಗಿರುವುದು ಗೊತ್ತಾಗಿದೆ. ಆತನ ಎಡೆಮುರಿ ಕಟ್ಟಿದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.