ಮನುಕುಲ ಕಂಡ ಅತ್ಯಂತ ಹಳೆಯ ಸಂಸ್ಕರಿತ ಚಿನ್ನವೆಂದು ಹೇಳಲಾದ, ಕ್ರಿಸ್ತ ಪೂರ್ವ 4,500 ರ ಕಾಲದ್ದು ಎಂದು ತಿಳಿಸಲಾದ ಮಣಿಯೊಂದನ್ನು ಬಲ್ಗೇರಿಯಾದ ಪ್ರಾಚ್ಯವಸ್ತು ಇಲಾಖೆ ಪತ್ತೆ ಮಾಡಿದೆ.
ಕಪ್ಪು ಸಮುದ್ರದ ಬಂದರು ವರ್ನಾದಲ್ಲಿ 1972ರಿಂದ 1991ರ ನಡುವೆ 5.8 ಕೆಜಿಯಷ್ಟು ಸಂಸ್ಕರಿತ ಚಿನ್ನ ದೊರಕಿತ್ತು. ಈ ಚಿನ್ನವನ್ನು ಜಗತ್ತಿನ ಅತ್ಯಂತ ಹಳೆಯ ಸಂಸ್ಕರಿತ ಚಿನ್ನವೆಂದು ತಿಳಿಸಲಾಗಿತ್ತು. ಆದರೆ ಬಲ್ಗೇರಿಯಾದಲ್ಲಿ ಮಾಡಲಾದ ಈ ಅನ್ವೇಷಣೆಯು ಸಂಸ್ಕರಿತ ಚಿನ್ನದ ಹಿಂದಿನ ಅಧ್ಯಾಯವನ್ನು 200 ವರ್ಷಗಳ ಹಿಂದಕ್ಕೆ ತಳ್ಳಿದೆ.
ಬಲ್ಗೇರಿಯಾದಲ್ಲಿರುವ ಪಜ಼ರ್ಡಿಕ್ ಎಂಬಲ್ಲಿ ಯೂರೋಪ್‌ನ ಮೊಟ್ಟ ಮೊದಲ ನಗರ ಸ್ಥಾಪನೆಯಾಗಿರುವ ಸಾಧ್ಯತೆ ಇದ್ದು, ಇದೊಂದು ವ್ಯವಸ್ಥಿತ ಊರು ಎಂಬಂತೆ ತೋರುತ್ತದೆ ಎಂದು ತಿಳಿಸುವ ಬಲ್ಗೇರಿಯನ್ ವಿಜ್ಞಾನ ಅಕಾಡೆಮಿಯ ಯಾವೊರ್ ಬೊಯಾಡಿಯೆವ್, ಇಲ್ಲಿ ತಮಗೆ ಸಿಕ್ಕ ಚಿನ್ನದ ಮಣಿಯನ್ನು ಬಹುಶಃ ಇದೇ ಜಾಗದಲ್ಲಿ ಉತ್ಪಾದಿಸಿದ್ದು, ಧಾರ್ಮಿಕ ವಿಧಿಯೊಂದರಲ್ಲಿ ಬಳಸಿರುವ ಸಾಧ್ಯತೆ ಇದೆ ಎಂದಿದ್ದಾರೆ.