ಶಿವಮೊಗ್ಗ: ಶಿವಮೊಗ್ಗದಲ್ಲಿ ಇಂದು ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
25 ಡಿವೈಎಸ್ಪಿ, 110 ಪಿಎಸ್ಐಗಳು, ಪೊಲೀಸ್, ಹೋಂ ಗಾರ್ಡ್ ಸೇರಿ 3500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಡಿಎಆರ್, ಆರ್.ಎ.ಎಫ್. ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಶಾಂತಿಭಂಗ ಮಾಡುವವರನ್ನು ಈಗಾಗಲೇ ಗುರುತಿಸಿ ಸೂಚನೆ ನೀಡಿದ್ದೇವೆ. ಶಾಂತ ರೀತಿಯಲ್ಲಿ ಮೆರವಣಿಗೆ ನಡೆಯಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಶಿವಮೊಗ್ಗ ನಗರದಾತ್ಯಂತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲದೆ ಮೆರವಣಿಗೆ ಸಾಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಹಿಂದೂ ಮಹಾ ಮಂಡಳಿಯಿಂದ ಶಿವಮೊಗ್ಗದ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣಪತಿಯ ವಿಸರ್ಜನಾ ಪೂರ್ವ ಮೆರವಣಗೆಯೂ ಅದ್ದೂರಿಯಾಗಿ ನಡೆಯಲಿದ್ದು, ನಗರವೆಲ್ಲ ಕೇಸರಿ ಧ್ವಜ ಹಾಗೂ ವಿವಿಧ ಅಲಂಕಾರಗಳೊಂದಿಗೆ ಸಿಂಗಾರಗೊಂಡಿದೆ.
ಬೆಳಿಗ್ಗೆ 9.30ಕ್ಕೆ ಗಣಪತಿ ವಿಸರ್ಜನಾ ಪೂರ್ವ ಮೆರವಣ ಗೆ ಭೀಮೇಶ್ವರ ದೇವಸ್ಥಾನದಿಂದ ಆರಂಭಗೊಳಲಿದೆ. ಕೋಟೆ ಮಾರಿಕಾಂಬಾ ವೃತ್ತದ ಬಳಿ, ಬೆಕ್ಕಿನ ಕಲ್ಮಠ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಶ್ರೀಗಳು ಗಣಪತಿಗೆ ಆರತಿ ಮಾಡುವುದರೊಂದಿಗೆ ಚಾಲನೆ ದೊರೆಯಲಿದೆ.
ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್, ಮಹಾನಗರ ಪಾಲಿಕೆ ಮತ್ತು ಹಿಂದೂ ಮಹಾಮಂಡಳಿ ಸಕಲ ಸಿದ್ಧತೆ ಮಾಡಿದ್ದು, ನಗರದ ಶಿವಪ್ಪನಾಯಕ ವೃತ್ತದ ಬಳಿ ಗಾಂಧಿಬಜಾರ್ ಮುಖ್ಯ ದ್ವಾರದಲ್ಲಿ ಕಾಶಿ ವಿಶ್ವನಾಥನ ಮಹಾದ್ವಾರ ಹಾಗೂ ಅಮೀರ್ ಅಹಮ್ಮದ್ ವೃತ್ತದಲ್ಲಿ ಆಯೋಧ್ಯೆಯ ಪ್ರತಿಕೃತಿ ಹಾಗೂ ನಗರದ ನೆಹರು ರಸ್ತೆಯಲ್ಲಿ ಗಣಪತಿಯ ವಿವಿಧ ನಾಮಾವಳಿ ಹಾಗೂ ಅಲಂಕೃತ ಬಂಟಿಂಗ್ಸ್, ಫ್ಲೆಕ್ಸ್ ಪ್ಲೆಕ್ಸ್, ದೈವಜ್ಞವೃತ್ತದಲ್ಲಿ ಗರುಡನ ಅಲಂಕಾರ, ಎಂ.ಆರ್.ಎಸ್. ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಕೃತಿ ಸ್ಥಾಪಿಸಲಾಗಿದೆ.
ಹಲವಾರು ಸಂಘ ಸಂಸ್ಥೆಗಳು ಗಣಪತಿಗೆ ನೂರಾರು ಸಂಖ್ಯೆಯಲ್ಲಿ ಬೃಹತ್ ಹಾರಗಳನ್ನು ಅರ್ಪಿಸಲು ಸಿದ್ಧತೆ ನಡೆಸಿವೆ. ಬೆಳಿಗ್ಗೆ 9.30ಯಿಂದ ನಾಳೆ ಬೆಳಿಗ್ಗೆ3ರವರೆಗೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಹಲವಾರು ಸಂಘ ಸಂಸ್ಥೆಗಳು, ಮಜ್ಜಿಗೆ, ಪಾನಕ, ಕೊಸುಂಬರಿ ಮತ್ತು ಉಪಹಾರದ ವ್ಯವಸ್ಥೆ ಹಾಗೂ ಸಿಹಿ ಹಂಚಿಕೆ ಮಾಡಲಿದ್ದಾರೆ.