ವಯನಾಡ್: ಕಳೆದ ಮೂರು ವಾರಗಳಿಂದ ಹುಲಿ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯ ಕುರುಕ್ಕನ್ಮೂಲ ಗ್ರಾಮದ ನಿವಾಸಿಗಳು ಭೀತಿಗೊಂಡಿದ್ದಾರೆ.
ಅರಣ್ಯಾಧಿಕಾರಿಗಳು ಹುಲಿ ಪತ್ತೆಗೆ ಎರಡು ತರಬೇತಿ ಪಡೆದ ಆನೆಗಳನ್ನು ಬಳಸಿ ಹುಡುಕಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಗುರುವಾರ ಬೆಳ್ಳಂಬೆಳಗ್ಗೆ ಹಸುವೊಂದು ಹುಲಿಗೆ ಬಲಿಯಾಗಿದ್ದು, ಮೇಕೆಯೂ ನಾಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ 17 ದಿನಗಳಿಂದ ಗ್ರಾಮದಲ್ಲಿ ಇದುವರೆಗೆ 17 ಸಾಕು ಪ್ರಾಣಿಗಳು ಈ ಹುಲಿ ದಾಳಿಗೆ ಬಲಿಯಾಗಿವೆ. ಸುಮಾರು 100 ಅಧಿಕಾರಿಗಳು ಮತ್ತು ಸ್ಥಳೀಯರು ಹುಲಿಯನ್ನು ಪತ್ತೆಹಚ್ಚಲು ಶೋಧಕಾರ್ಯ ನಡೆಸಿದ್ರೂ, ಅವರಿಗೆ ಹುಲಿಯ ಕೆಲವು ಸಿಸಿಟಿವಿ ದೃಶ್ಯಗಳು ಮಾತ್ರ ಸಿಕ್ಕಿವೆ ಹೊರತು ವ್ಯಾಘ್ರ ಪತ್ತೆಯಾಗಿಲ್ಲ.
ನಿವೃತ್ತ ಶಿಕ್ಷಕ ಜಾನ್ ಎಂಬುವವರಿಗೆ ಸೇರಿದ ಹಸುವಿನ ಶವ ಅವರ ಮನೆಯಿಂದ ಸುಮಾರು 30 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮಧ್ಯರಾತ್ರಿ ಹಸುವಿನ ಕೂಗು ಕೇಳಿ ಗಾಬರಿಗೊಂಡ ನಿವಾಸಿಗಳು ಮನೆಗೆ ಬೀಗ ಹಾಕಿದ್ದಾರೆ. ಗುರುವಾರ ಬೆಳಗ್ಗೆ ಹಸುವನ್ನು ಹುಲಿ ಕೊಂದಿರುವುದು ಗೊತ್ತಾಗಿದೆ.
ವ್ಯಾಘ್ರದ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಉನ್ನತ ಅರಣ್ಯ ಅಧಿಕಾರಿ ಡಿ.ಕೆ. ವಿನೋದ್ ಕುಮಾರ್, ಈ ಹುಲಿಯು ವಯನಾಡ್ ಜಿಲ್ಲೆಯ ಹುಲಿ ಡೇಟಾಬೇಸ್ ಅಡಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ ಎಂದು ಹೇಳಿದ್ದಾರೆ.
ಹುಲಿಯು ಹಾನಿಯನ್ನುಂಟು ಮಾಡುತ್ತಿರುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಲ್ಲಿ ಅರಣ್ಯಾಧಿಕಾರಿಗಳ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ. ಹುಲಿಯನ್ನು ಪಳಗಿಸಲು ಟ್ರ್ಯಾಂಕ್ವಿಲೈಸರ್ಗಳನ್ನು ಬಳಸಲು ಅವರಿಗೆ ಅನುಮತಿ ನೀಡಲಾಗಿದೆ.
ಅರಣ್ಯದ ಗಡಿ ಗ್ರಾಮಗಳಲ್ಲಿರುವ ರಾಜ್ಯದ ಕೆಲವು ಭಾಗಗಳಲ್ಲಿ ಕಂಡುಬರುವ ಮನುಷ್ಯ-ಪ್ರಾಣಿ ಸಂಘರ್ಷವು ಕಳವಳದ ವಿಷಯವಾಗಿದೆ.