ಬೆಳಗಾವಿ: ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹುಲಿ ಉಗುರು ಧರಿಸಿರುವ ಪ್ರಕರಣಕ್ಕೆ ಸಬಂಧಿಸಿದಂತೆ ಅರಣ್ಯಾಧಿಕಾರಿಗಳು ಸಚಿವೆ ಹೆಬ್ಬಾಳ್ಕರ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯ ಕುವೆಂಪುನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದಲ್ಲಿ ಬೆಳಗಾವಿ ಡಿಸಿಎಫ್ ಶಂಕರ್ ಕಲ್ಲೋಳಕರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್ ಬಳಿ ಇರುವುದು ಪ್ಲಾಸ್ಟಿಕ್ ಉಗುರು. ಅದು ನಿಜವಾದ ಹುಲಿ ಉಗುರು ಅಲ್ಲ. ಮದುವೆ ಸಂದರ್ಭದಲ್ಲಿ ಯಾರೋ ಆತನಿಗೆ ಗಿಫ್ಟ್ ಕೊಟ್ಟಿದ್ದರು ಎಂದರು.
ಈಗ ಒರಿಜಿನಲ್ ಹುಲಿ ಉಗುರು ಎಲ್ಲಿ ಸುಗುತ್ತೆ? ಹುಲಿ ಉಗುರು, ಹುಲಿ ಚರ್ಮ ಇದೆಲ್ಲ ಈಗ ಸಿಗುವುದೂ ಇಲ್ಲ. ನನ್ನ ಮಗನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು ಅಲ್ಲ. ಅಧಿಕಾರಿಗಳು ಬಂದಿದ್ದಾರೆ ಪರಿಶೀಲನೆ ಮಾಡುತ್ತಿದ್ದಾರೆ. ಅದು ನಿಜವಾದ ಹುಲಿ ಉಗುರು ಹೌದೋ ಅಲ್ಲವೋ ಎಂಬುದನ್ನು ನೋಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಸಚಿವರಾಗಿರುವ ನಮಗೂ ಒಂದೇ, ಸಾಮಾನ್ಯ ಜನರಿಗೂ ಒಂದೆ. ನಾನು ಸಸ್ಯಹಾರಿ, ಹುಲಿ, ಜಿಂಕೆ, ಕೋಳಿ ಬಲಿಯನ್ನು ಇಷ್ಟಪಡಲ್ಲ. ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ನಾವೆಲ್ಲರೂ ಸಹಕಾರ ನೀಡುತೇವೆ ಎಂದು ಹೇಳಿದರು.