ತುಮಕೂರು: ಹುಲಿ ಉಗುರು ಧರಿಸಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಹುಲಿ ಉಗುರು ಇರುವ ಹಲವರಿಗೆ ತಲೆನೋವು ಶುರುವಾಗಿದೆ.
ನಟ ದರ್ಶನ್ ಕೂಡ ಹುಲಿ ಉಗುರು ಇರುವ ಚೈನ್ ಧರಿಸಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದ್ದು, ಅವರ ವಿರುದ್ಧವೂ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.
ಈ ಬೆಳವಣಿಗೆ ನಡುವೆಯೇ ಇದೀಗ ಮತ್ತೋರ್ವ ಗುರೂಜಿಗೂ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದರಕೆರೆ ಶನಿಮಹಾತ್ಮ ದೇಗುಲದ ಅರ್ಚಕರಾಗಿದ್ದ ಬಸವೇಶ್ವರ ಮಠದ ಧನಂಜಯ ಗುರೂಜಿ ಬಳಿಯೂ ಹುಲಿ ಉಗುರು ಇದೆ ಎನ್ನಲಾಗಿದೆ.
ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿ ಫೋಟೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್, ಧನಂಜಯ ಗುರೂಜಿ ಚಿನ್ನದ ಚೈನ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಧನಂಜಯ ಗುರೂಜಿ, ಅದು ಆರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು.ಹಾಗಾಗಿ ಅದನ್ನು ಎಸೆದಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಧನಂಜಯ ಗುರೂಜಿ ಹೇಳಿಕೆ ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಎಸೆದಿರುವ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.