ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಟಿಕೆಟ್ ಇನ್ಸ್ ಪೆಕ್ಟರ್ ಓರ್ವರನ್ನು ಬಂಧಿಸಲಾಗಿದೆ.
ಗೋವಿಂದರಾಜು (49) ಬಂಧಿತ ಆರೋಪಿ. ಮೆಜೆಸ್ಟಿಕ್ ನಲ್ಲಿ ಸೌಥ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್ ಪೆಕ್ಟರ್ ಆಗಿ ಆರೋಪಿ ಕೆಲಸ ಮಾಡುತ್ತಿದ್ದ.
ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸಿದ್ದ ಆರೋಪ ಕೇಳಿಬಂದಿದೆ. ಅಭ್ಯರ್ಥಿಗಳಿಂದ ಪಿಡಿಒ ಹುದ್ದೆಗೆ 25 ಲಕ್ಷ, ಕೆ ಎ ಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿ ಮಾತನಾಡಿದ್ದ.
ಪರೀಕ್ಷೆಯಲ್ಲಿ ಗೊತ್ತಿಲ್ಲದ ಉತರದ ಜಾಗದಲ್ಲಿ ಖಾಲಿ ಬಿಟ್ಟು, ಉತ್ತರವನ್ನು ತಾನೇ ಬರೆಯುವುದಾಗಿ ಹೇಳಿ, ಅಭ್ಯರ್ಥಿಗಳಿಂದ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿ ಸರ್ಟಿಫಿಕೆಟ್ ಗಳನ್ನು, ಚೆಕ್ ಗಳನ್ನು ಪಡೆದುಕೊಳ್ಳುತ್ತಿದ್ದ. ಭಾನುವಾರ ನಡೆದಿದ್ದ ಕೆ ಎ ಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಅಭ್ಯರ್ಥಿಯೊಬ್ಬರನ್ನು ಭೇಟಿಯಾಗಲೆಂದು ವಿಜಯನಗರಕ್ಕೆ ಬಂದಿದ್ದ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.