ನಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುವುದೇ ಥೈರಾಯ್ಡ್ ಗೃಂಥಿ. ಹಾರ್ಮೋನ್ ಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಶರೀರದಲ್ಲಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ.
ಒಮ್ಮೆ ಥೈರಾಯ್ಡ್ ಸಮಸ್ಯೆ ಶುರುವಾಯಿತೆಂದರೆ ನೀವು ನಿಯಮಿತವಾಗಿ ಔಷಧಿಯ ಸೇವನೆ ಮಾಡಬೇಕಾಗುತ್ತದೆ. ಔಷಧಿ ಸೇವಿಸಿದ ಮಾತ್ರಕ್ಕೆ ಥೈರಾಯ್ಡ್ ಪೂರ್ತಿಯಾಗಿ ಗುಣಮುಖವಾಗುವುದಿಲ್ಲ. ನಮ್ಮ ಆಹಾರ, ಜೀವನಕ್ರಿಯೆ ಇವುಗಳ ಮೂಲಕವೇ ನಾವು ಥೈರಾಯ್ಡ್ ಅನ್ನು ಒಂದು ಹಂತಕ್ಕೆ ನಿಯಂತ್ರಿಸಲು ಸಾಧ್ಯ.
ಥೈರಾಯ್ಡ್ ಸಮಸ್ಯೆಯಿಂದ ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಹಾರ್ಮೋನ್ ಉತ್ಪಾದಿಸುತ್ತದೆ. ಹಾರ್ಮೋನುಗಳ ವ್ಯತ್ಯಾಸದಿಂದ ನಿದ್ರಾಹೀನತೆ, ತೂಕ ಇಳಿಕೆ ಮತ್ತು ಬೊಜ್ಜಿನ ಸಮಸ್ಯೆಗಳು ಉಂಟಾಗುತ್ತದೆ. ಥೈರಾಯ್ಡ್ ಗೆ ಸಂಬಂಧಿಸಿದ ಔಷಧಿಗಳು ಹಾರ್ಮೋನ್ ಲೆವಲ್ ಸಾಮಾನ್ಯವಾಗಿರುವಂತೆ ನೋಡಿಕೊಳ್ಳುತ್ತವೆ.
ಥೈರಾಯ್ಡ್ ಮಾತ್ರೆಯನ್ನು ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಸೇವಿಸುವುದು ಅತೀ ಮುಖ್ಯ. ಹಾಗಾಗಿ ಥೈರಾಯ್ಡ್ ಮಾತ್ರೆಯನ್ನು ಬೆಳಿಗ್ಗೆ ತಿಂಡಿ ತಿನ್ನುವ ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚಿತವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಮತ್ತು ಮೆಡಿಸಿನ್ ಅನ್ನು ಟೀ ಅಥವಾ ಕಾಫಿಯ ಜೊತೆ ತೆಗೆದುಕೊಳ್ಳಬಾರದು. ಆಹಾರದ ಬಳಿಕ ಮಾತ್ರೆ ಸೇವಿಸಿದಲ್ಲಿ ನಿಮ್ಮ ಶರೀರದ ಮೇಲೆ ಔಷಧಿಯ ಪ್ರಭಾವ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಥೈರಾಯ್ಡ್ ಮೆಡಿಸಿನ್ ತೆಗೆದುಕೊಳ್ಳುವ ಸಮಯದಲ್ಲಿ ಬೇರೆ ಮೆಡಿಸಿನ್ ಅನ್ನು ತೆಗೆದುಕೊಳ್ಳಬೇಡಿ. ಹಾಗೊಮ್ಮೆ ಬೇರೆ ಮೆಡಿಸಿನ್ ತೆಗೆದುಕೊಳ್ಳಬೇಕೆಂದರೆ ಅರ್ಧ ಅಥವಾ ಒಂದು ಗಂಟೆಯ ಅಂತರದಲ್ಲಿ ಮೆಡಿಸಿನ್ ಸೇವಿಸಿ. ಥೈರಾಯ್ಡ್ ಔಷಧಿಯನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಬೇಡಿ. ಒಂದು ಡೋಸ್ ಮಿಸ್ ಮಾಡಿ ಇನ್ನೊಂದು ಅಲ್ಟರ್ನೇಟ್ ಡೋಸ್ ಔಷಧಿ ತೆಗೆದುಕೊಳ್ಳುವುದು ನಿಮಗೆ ವಿಷಕಾರಿಯಾಗಬಹುದು.