
ನಿಮ್ಮ ದೇಹದ ಯಾವುದೇ ಭಾಗದಲ್ಲಿ ಅನಾವಶ್ಯಕವಾಗಿ ಕೂದಲು ಬೆಳೆದಿದ್ದರೆ ಅದನ್ನು ತೆಗೆದುಹಾಕುವುದು ಈಗ ಬಲು ಸುಲಭ. ಪ್ರತಿ ಬಾರಿ ವ್ಯಾಕ್ಸಿಂಗ್ ಮಾಡಲೆಂದು ಬ್ಯೂಟಿಪಾರ್ಲರ್ ಕದ ತಟ್ಬಬೇಕಿಲ್ಲ. ಮನೆಯಲ್ಲೇ ಇರುವ ಕೆಲವು ವಸ್ತುಗಳ ನೆರವಿನಿಂದ ಮನೆಯಲ್ಲೇ ಕೂದಲನ್ನು ತೆಗೆಯಬಹುದು.
ಕಾಲು ಕೈಗಳಲ್ಲಿ ಬೆಳೆದಿರುವ ಅನಾವಶ್ಯಕ ಕೂದಲಿನ ಮೇಲೆ ಸೋಪು ಹಚ್ಚಿ. ಬಳಿಕ ಪ್ಯೂಮಿಕ್ ಎಂಬ ಕಲ್ಲಿನಿಂದ ಮೃದುವಾಗಿ ಕೈ ಕಾಲುಗಳನ್ನು ತಿಕ್ಕಿ. ಈ ಕಲ್ಲು ತುಸು ಗಟ್ಟಿಯಾಗಿಯೇ ಇರುತ್ತದೆ ಹಾಗಾಗಿ ಮೃದುವಾಗಿ ತಿಕ್ಕಿದರೆ ಸಾಕು.
ಈ ಕಲ್ಲು ಯಾವುದೇ ಫ್ಯಾನ್ಸಿ ಮಳಿಗೆಗಳಲ್ಲಿ ಇಲ್ಲವೇ ಸೌಂದರ್ಯ ವರ್ಧಕ ಅಂಗಡಿಗಳಲ್ಲಿ ಲಭ್ಯವಿದೆ. ಇದನ್ನು ನಿತ್ಯ ಬಳಸಬೇಕಿಲ್ಲ. ಎರಡರಿಂದ ಮೂರು ದಿನಕ್ಕೊಮ್ಮೆ ಉಜ್ಜಿಕೊಂಡರೆ ಸಾಕು. ಇದರಿಂದ ಕೂದಲು ಬೆಳೆಯುವುದು ನಿಧಾನವಾಗುತ್ತದೆ.
ತೆಂಗಿನೆಣ್ಣೆಗೆ ಪರಿಶುದ್ಧವಾದ ಅರಶಿನ ಪುಡಿಯನ್ನು ಉದುರಿಸಿ. ಎರಡನ್ನು ಬೆರೆಸಿ ಬಿಸಿ ಮಾಡಿ. ತಣ್ಣಗಾದ ಬಳಿಕ ದೇಹದ ಯಾವುದೇ ಭಾಗಕ್ಕೆ ಹಚ್ಚಿ. ಕೈಕಾಲು ಅಥವಾ ಮುಖಕ್ಕೆ ತಿಕ್ಕಿ 15 ನಿಮಿಷ ಬಳಿಕ ಸ್ನಾನ ಮಾಡಿದರೆ ದೇಹದಲ್ಲಿರುವ ಅನಾವಶ್ಯಕ ಕೂದಲು ಇಲ್ಲವಾಗುತ್ತದೆ.
ಇದನ್ನು ಮುಖಕ್ಕೂ ಹಚ್ಚಬಹುದು. ಇದರಿಂದ ನಿಮ್ಮ ತ್ವಚೆ ಕಾಂತಿಯನ್ನೂ ಪಡೆದುಕೊಳ್ಳುತ್ತದೆ. ಅದೇ ಪ್ಯೂಮಿಕ್ ಸ್ಟೋನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ.