ಈಗ ದೇಶದ ಯಾವುದೇ ಮೂಲೆಗೆ ಹೋದರೂ ಕೇಳಿಬರುವುದು ನೀರಜ್ ಚೋಪ್ರಾ ಹೆಸರು. ಆಗಸ್ಟ್ 7 ರಂದು ನಡೆದ ಒಲಿಂಪಿಕ್ಸ್ ನಲ್ಲಿ, 23 ವರ್ಷದ ನೀರಜ್ ಅವರು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಡುವುದರ ಮೂಲಕ ಕೀರ್ತಿ ಪತಾಕೆ ಹಾರಿಸಿದ್ದಾರೆ. ರಾಷ್ಟ್ರವ್ಯಾಪಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿತ್ತು.
ಇದೆಲ್ಲದರ ನಡುವೆ, ಪ್ರಸಿದ್ಧ ಗಾಯಕ ದಲೇರ್ ಮೆಹೆಂದಿಯವರ ಹಾಡಿಗೆ ನೀರಜ್ ಹೆಜ್ಜೆ ಹಾಕಿರುವ ಹಳೆ ವಿಡಿಯೋ ಸದ್ಯ ಭಾರಿ ವೈರಲ್ ಆಗಿದೆ. ವಿಡಿಯೊ ಅಷ್ಟೊಂದು ಸ್ಪಷ್ಟವಾಗಿಲ್ಲದಿದ್ದರೂ, ದಲೇರ್ ಮೆಹೆಂದಿಯ ಹಾಡಿನ ಟ್ಯೂನ್‌ಗಳಿಗೆ ಕುಣಿದಾಡಿರುವ ವ್ಯಕ್ತಿ ನೀರಜ್ ಚೋಪ್ರಾ ಎಂದು ಹೇಳಲಾಗಿದೆ.
ಇತ್ತೀಚೆಗೆ, ನೀರಜ್ ಅವರು ಟೈಮ್ಸ್ ನೌ ಜೊತೆ ಸಂವಾದ ನಡೆಸಿದರು ಮತ್ತು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಂತರ ನಮ್ಮ ರಾಷ್ಟ್ರಗೀತೆ ನುಡಿಸುವುದನ್ನು ಕೇಳಿದಾಗ ಅವರಿಗಾದ ರೋಮಾಂಚನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ‘’ಪ್ರತಿಯೊಬ್ಬ ಕ್ರೀಡಾಪಟುವೂ ಒಲಿಂಪಿಕ್ಸ್ ನಲ್ಲಿ ತಮ್ಮ ದೇಶಕ್ಕಾಗಿ ಚಿನ್ನ ಗೆಲ್ಲುವ ಕನಸು ಕಾಣುತ್ತಾರೆ. ನನಗೆ ಅಪಾರ ಸಂತೋಷ ಮತ್ತು ತೃಪ್ತಿಯನ್ನು ನೀಡುವುದು ನಾನು ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ಇದು ನನ್ನ ಸಂತೋಷ ಮಾತ್ರ ಅಲ್ಲ, ಅದು ಇಡೀ ದೇಶದ್ದು’’ ಎಂದು ಹೇಳಿದ್ದರು.