ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ಸಂಕ್ರಾಂತಿ ವೇಳೆ ಗಾಳಿಪಟ ಹಾರಿಸಲಾಗುತ್ತದೆ. ಹೀಗೆ ಗಾಳಿಪಟ ಹಾರಿಸುವಾಗ ಕೆಲವರು ಚೀನಾ ಮಾಂಜಾ (ದಾರ) ಬಳಸುತ್ತಿದ್ದು, ಈ ಕಾರಣಕ್ಕಾಗಿ ಪ್ರತಿ ವರ್ಷವೂ ಸಾವಿನ ಒಂದಾದರೂ ಪ್ರಕರಣಗಳು ವರದಿಯಾಗುತ್ತಿವೆ. ಇದು ಈ ಬಾರಿಯೂ ಪುನರಾವರ್ತನೆಯಾಗಿದೆ.
ಹೌದು, ಮಹಾರಾಷ್ಟ್ರದ ಭಿವಂಡಿಯಲ್ಲಿ ಈ ಘಟನೆ ಸಂಭವಿಸಿದ್ದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಉಲ್ಲಾಸ ನಗರದ ನಿವಾಸಿ 47 ವರ್ಷದ ಸಂಜಯ್ ಎಂಬವರು ಸಾವಿಗೀಡಾಗಿದ್ದಾರೆ. ಮಕರ ಸಂಕ್ರಾಂತಿಯಂದು ಸಂಜೆ ಬಾಳಾ ಸಾಹೇಬ್ ಠಾಕ್ರೆ ಮೇಲ್ಸೇತುವೆ ಮೇಲೆ ಸಂಜಯ್ ಬೈಕಿನಲ್ಲಿ ಹೋಗುತ್ತಿದ್ದಾಗ ಅವರ ಕುತ್ತಿಗೆಗೆ ಚೀನಾ ಮಾಂಜಾ ಸಿಲುಕಿದೆ.
ಇದರ ಪರಿಣಾಮ ಅವರ ಕತ್ತು ಕೊಯ್ದಿದ್ದು ಬೈಕ್ ರಸ್ತೆ ಬದಿಗೆ ಡಿಕ್ಕಿ ಹೊಡೆದಿದೆ. ಸಂಜಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚೀನಾ ಮಾಂಜಾವನ್ನು ಗಾಜಿನ ಪುಡಿಯಿಂದ ತಯಾರಿಸುವ ಕಾರಣ ಹರಿತವಾಗಿರುತ್ತದಲ್ಲದೆ ಕತ್ತಿಗೆ ಸಿಲುಕಿದಾಗ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಇದನ್ನು ನಿಷೇಧಿಸಲಾಗಿದ್ದು ಆಗಿದ್ದರೂ ಸಹ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.