ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಜಾಲ ಮಿತಿಮೀರಿದೆ. ಈ ಬಾರಿ ನಡೆದ ಹನಿಟ್ರ್ಯಾಪ್ನಲ್ಲಿ ಮತ್ತೊಬ್ಬ ಟೆಕ್ಕಿ ಬಲಿಪಶು ಆಗಿದ್ದಾರೆ. ಯುವತಿಯ ಹಿಂದೆ ಹೋಗಿ ಟೆಕ್ಕಿ ಕಾರು, ಮೊಬೈಲ್ ಹಾಗೂ ಹಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರಿನ ಗಾರೆಪಾಳ್ಯ ನಿವಾಸಿಯಾಗಿದ್ದ ಟೆಕ್ಕಿ ತರಕಾರಿ ತರಲು ಸೂಪರ್ ಮಾರ್ಕೆಟ್ಗೆ ತೆರಳಿದ್ದರು. ಈ ವೇಳೆ ಯುವತಿಯೊಂದಿಗೆ ಟೆಕ್ಕಿಗೆ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೂ ತಿರುಗಿತ್ತು. ಯುವತಿಯೊಂದಿಗೆ ಅತ್ಯಂತ ಸಲುಗೆಯಿಂದ ಇದ್ದ ಟೆಕ್ಕಿ ವೀಕೆಂಡ್ಗಳಲ್ಲಿ ಹೋಟೆಲ್ ಹಾಗೂ ರೆಸ್ಟಾರೆಂಟ್ಗಳಿಗೆ ತೆರಳುತ್ತಿದ್ದರು.
ತನ್ನ ಕುಟುಂಬಸ್ಥರನ್ನು ಪರಿಚಯ ಮಾಡಿಸುತ್ತೇನೆಂದು ಯುವತಿಯು ಟೆಕ್ಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಯುವತಿಯ ಮಾತನ್ನು ನಂಬಿ ಆಕೆಯ ಮನೆಗೆ ತೆರಳಿದ್ದ ಟೆಕ್ಕಿ ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕೂಡಲೇ ಆತನಿದ್ದ ಕೋಣೆಗೆ ನುಗ್ಗಿದ ಇತರೆ ಆರೋಪಿಗಳು 10 ಲಕ್ಷ ರೂಪಾಯಿ ನೀಡುವಂತೆ ಧಮ್ಕಿ ಹಾಕಿದ್ದಾರೆ.
ಹಣ ನೀಡದೇ ಇದ್ದಲ್ಲಿ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಟೆಕ್ಕಿ ಒಪ್ಪದ ಹಿನ್ನೆಲೆಯಲ್ಲಿ ಅವರ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ರೂಪಾಯಿ ಹಣ ಹಾಗೂ ಐಫೋನ್ ಕಿತ್ತು ಪರಾರಿಯಾಗಿದ್ದಾರೆ.
ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಟೆಕ್ಕಿ ಪ್ರಕರಣ ದಾಖಲಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.