ಧನ್‌ಬಾದ್: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಮಾರುಕಟ್ಟೆಯ ಕೆಲವು ಅಂಗಡಿಗಳಿಗೆ ತಗುಲಿದ ಬೆಂಕಿಯಿಂದ ಹೊರಹೊಮ್ಮಿದ ವಿಷಕಾರಿ ಅನಿಲ ಉಸಿರಾಡಿದ ಆರು ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಂಚಿಯಿಂದ 170 ಕಿಮೀ ದೂರದಲ್ಲಿರುವ ಕೆಂಡುವಾ ಬಜಾರ್ ನಲ್ಲಿ ಸೋಮವಾರ ರಾತ್ರಿ 9.30ಕ್ಕೆ ಈ ಘಟನೆ ಸಂಭವಿಸಿದೆ.
ಕಟ್ಟಡದಲ್ಲಿರುವ ಕಾಸ್ಮೆಟಿಕ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿ ಮಾಲೀಕ ಸುಭಾಷ್ ಗುಪ್ತಾ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮೇಲಿನ ಮಹಡಿಗೆ ಬೆಂಕಿ ವ್ಯಾಪಿಸಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಸುಭಾಷ್ ಅವರ ತಾಯಿ ಉಮಾದೇವಿ(70), ಸಹೋದರಿ ಪ್ರಿಯಾಂಕಾ ಗುಪ್ತಾ(37) ಮತ್ತು ಪುತ್ರಿ ಸೌಮ್ಯಾ ಗುಪ್ತಾ ಅಲಿಯಾಸ್ ಮೌಳಿ(6) ಎಂದು ಗುರುತಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ(ಕಾನೂನು ಮತ್ತು ಸುವ್ಯವಸ್ಥೆ) ಅರವಿಂದ್ ಕುಮಾರ್ ಬಿನ್ಹಾ, ಬೆಂಕಿಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಆದರೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಅಥವಾ ದೀಪಾವಳಿ ಆಚರಣೆಗಾಗಿ ಹಚ್ಚಿದ ದೀಪಗಳು ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.
ಅಕ್ಕಪಕ್ಕದ ಇತರ ಆರು ಅಂಗಡಿಗಳಿಗೂ ಬೆಂಕಿ ತಗುಲಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.