ಉತ್ತರ ಪ್ರದೇಶದ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇಯಲ್ಲಿ ಕಾರ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಇಟಾವಾ ಜಿಲ್ಲೆಯ ಉಸ್ರಹಾರ್ ಪ್ರದೇಶದಲ್ಲಿ 125 ಕಿಮೀ ಮಾರ್ಕ್ ಬಳಿ ಅಪಘಾತ ಸಂಭವಿಸಿದೆ. ಅಲ್ಲಿ ಆರು ಮಂದಿ ಪ್ರಯಾಣಿಕರೊಂದಿಗೆ ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಕಾರ್ ಶನಿವಾರ ತಡರಾತ್ರಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಹಿರಿಯ ಪೊಲೀಸ್ ಅಧೀಕ್ಷಕ ಸಂಜಯ್ ಕುಮಾರ್ ವರ್ಮಾ ಮಾಹಿತಿ ನೀಡಿ, ಪ್ರಯಾಣಿಕರು ಲಕ್ನೋದಲ್ಲಿ ದಸರಾ ರಜೆಗೆಂದು ಹಿಂದಿರುಗುತ್ತಿದ್ದಾಗ ದುರಂತ ಸಂಭವಿಸಿದೆ. ಅಫ್ಘಾನಿಸ್ತಾನದ ಪ್ರಜೆ ನಾಜ್(30), ಆಕೆಯ ರಷ್ಯಾದ ಸ್ನೇಹಿತೆ ಕಥರೀನಾ(20) ಮತ್ತು ದೆಹಲಿಯ ತುಘಲಕಾಬಾದ್ ಎಕ್ಸ್ ಟೆನ್ಶನ್‌ನ ಕಾರು ಚಾಲಕ ಸಂಜೀವ್(40) ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗಾಯಗೊಂಡ ನಾಜ್ ಅವರ ಸಹೋದರಿ ಅತಿಫಾ(25), ಪ್ರಸ್ತುತ ದೆಹಲಿಯ ಲಜಪತ್ ನಗರದಲ್ಲಿ ವಾಸಿಸುತ್ತಿರುವ ಕ್ರಿಸ್ಟಿನ್(20), ಮತ್ತು ದೆಹಲಿಯ ಅಂಬೇಡ್ಕರ್ ನಗರದ ರಾಹುಲ್(38) ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಇಟಾವಾದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.