ಭೋಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದೆ.
ಪರ್ರ್ಸ್ ಇನ್ ದಿ ವೈಲ್ಡ್! ಕುನೋ ನ್ಯಾಷನಲ್ ಪಾರ್ಕ್ ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹಂಚಿಕೊಳ್ಳಲು ರೋಮಾಂಚನಗೊಂಡಿದ್ದೇನೆ. ನಮೀಬಿಯಾದ ಚಿರತೆ ಆಶಾಗೆ ಈ ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಸಿಕ್ಕ ಯಶಸ್ಸು ಇದಾಗಿದೆ ಎಂದು ಅವರು ಬಣ್ಣಿಸಿದ್ದು, ಯೋಜನೆಯಲ್ಲಿ ತೊಡಗಿರುವ ಎಲ್ಲಾ ತಜ್ಞರು, ಕುನೋ ವನ್ಯಜೀವಿ ಅಧಿಕಾರಿಗಳು, ದೇಶದ ವನ್ಯಜೀವಿ ಪ್ರೇಮಿಗಳಿಗೆ ನನ್ನ ಅಭಿನಂದನೆಗಳು ಎಂದು ಯಾದವ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮಾರ್ಚ್ 2023 ರಲ್ಲಿ ನಂತರ ಜ್ವಾಲಾ ಎಂದು ಮರುನಾಮಕರಣಗೊಂಡ ಸಿಯಾಯಾ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದಳು, ಆದರೆ ಅವುಗಳಲ್ಲಿ ಒಂದು ಮಾತ್ರ ಬದುಕುಳಿದಿದೆ. ಜ್ವಾಲಾ ಚೀತಾವನ್ನು ನಮೀಬಿಯಾದಿಂದ ಕೆಎನ್‌ಪಿಗೆ ಸ್ಥಳಾಂತರಿಸಲಾಗಿತ್ತು.