ಶಿಮ್ಲಾ: ಏಕಏಕಿ ನದಿಯ ನೀರಿನ ಮಟ್ಟ ಏರಿಕೆಯಾದ ಕಾರಣ ಸ್ನಾನ ಮಾಡುತ್ತಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಅದೃಷ್ಟವಶಾತ್ ಇಬ್ಬರನ್ನು ಪಾರು ಮಾಡಲಾಗಿದ್ದು, ಒಬ್ಬ ಬಾಲಕ ನಾಪತ್ತೆಯಾಗಿರುವ ದುರ್ಘಟನೆ ಹಿಮಾಚಲ ಪ್ರದೇಶದ ಸೋಲಾನ್ ಜಿಲ್ಲೆಯ ನಲಘರ್ ಪ್ರದೇಶದಲ್ಲಿ ನಡೆದಿದೆ.
ಮಕ್ಕಳು ನೀರಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅವರಲ್ಲಿ ಇಬ್ಬರನ್ನು ರಕ್ಷಿಸಿದ್ದು, ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಸುದೇಶ್ ಮೊಖ್ತಾ ಅವರು ಹೇಳುವಂತೆ, “ಮೂವರು ಮಕ್ಕಳು ಸೊಲನ್ ಜಿಲ್ಲೆಯ ನಲಘರ್ ಪ್ರದೇಶದ ದಿಯೋಲಿ ಖಡ್‌ನಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಾಯಿತು. ನೀರಿನ ಬಲವಾದ ಪ್ರವಾಹದಲ್ಲಿ ಮಕ್ಕಳು ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹೇಳಿದರು.
“ಒಬ್ಬ ಬಾಲಕ ಇನ್ನೂ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ” ಎಂದು ಸುದೇಶ್ ಮೊಖ್ತಾ ಹೇಳಿದರು.