ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಶನಿವಾರ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ನಾಲ್ವರು ವಯಸ್ಕರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಭಿಂಡ್‌ನ ಗೋರ್ಮಿ ಪ್ರದೇಶದ ದಲೇ ಕಾ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡ ಮನೆ ಅಖಿಲೇಶ್ ಕಡರೆ ಎಂಬುವರಿಗೆ ಸೇರಿದ್ದು. ಅವರ ಮಗನ ಮದುವೆಗೆ ಬಂದಿದ್ದ ಹಲವಾರು ಸಂಬಂಧಿಕರು ಮನೆಯಲ್ಲಿದ್ದರು.
ಮದುವೆ ನಿಮಿತ್ತ ಮನೆ ಮಾಲೀಕರು ಸುಮಾರು ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಮನೆಯಲ್ಲಿಟ್ಟಿದ್ದರು. ಸಿಲಿಂಡರ್ ಗಳಲ್ಲಿ ಒಂದು ಬೆಂಕಿ ಹೊತ್ತಿಕೊಂಡ ನಂತರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಮನೆಗೆ ಬೆಂಕಿ ಹತ್ತಿಕೊಂಡಿದೆ.
ಅಖಿಲೇಶ್ ಕಡೆರೆ ಅವರ ಪುತ್ರಿ ಭಾವನಾ(6) ಮತ್ತು ಕಾರ್ತಿಕ್ (4) ಅವರ ಇಬ್ಬರು ಮಕ್ಕಳೊಂದಿಗೆ ಅವರ ಸಂಬಂಧಿ ಪಾರಿ(5) ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಅಖಿಲೇಶ್ ಕಡೆರೆ, ಅವರ ಪತ್ನಿ ವಿಮಲಾ, ಪುತ್ರಿ ಪೂಜಾ ಮತ್ತು ಇನ್ನೊಬ್ಬ ಮಹಿಳೆ ಸಂಬಂಧಿ ಮೀರಾ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡಿರುವ ಅಖಿಲೇಶ್ ಕಡೇರೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡ ಮೂವರು ಮಹಿಳೆಯರನ್ನು ಚಿಕಿತ್ಸೆಗಾಗಿ ಗೊರ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ರಾಜೇಶ್ ರಾಥೋಡ್ ತಿಳಿಸಿದ್ದಾರೆ.