ತುಮಕೂರು: ಗ್ರಾಮ ಪಂಚಾಯಿತಿಗೆ ಬಂದರೆ ನಾಯಿಗೆ ಹೊಡೆದಂತೆ ಹೊಡಿತೀನಿ ಎಂದು ಡಾಟಾ ಎಂಟ್ರಿ ಆಪರೇಟರ್ ನಾಗರಾಜ್ ಮತ್ತು ಇಂಜಿನಿಯರ್ ಗಿರಿರಾಜು ಅವರಿಗೆ ಗ್ರಾಪಂ ಸದಸ್ಯ ಫೋನ್ ನಲ್ಲಿ ಆವಾಜ್ ಹಾಕಿದ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಪಂ ಸದಸ್ಯ ಮಹೇಶ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ನರೇಗಾ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿಸಿದ್ದಾರೆ ಎಂದು ಗ್ರಾಮಸ್ಥ ಗಂಗಾಧರ್ ದೂರು ನೀಡಿದ್ದು, ಪರಿಶೀಲನೆಗೆ ತೆರಳಿದ್ದ ವೇಳೆಯಲ್ಲಿ ಮಹೇಶ್ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇನೆ. ನಾನು ಮಾಡಿದ ಕಾಮಗಾರಿಯನ್ನು ಪರಿಶೀಲನೆ ಮಾಡಬೇಕಾದ ಅಗತ್ಯವಿಲ್ಲ. ನಾನು ಹೇಳಿದಂತೆ ಬಿಲ್ ಮಾಡಿಕೊಡಬೇಕು ಎಂದು ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ನಂತರ ಕರೆ ಮಾಡಿ ಆವಾಜ್ ಹಾಕಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದ್ದು, ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಮತ್ತು ಇಂಜಿನಿಯರ್ ತುಮಕೂರು ಜಿಲ್ಲೆ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.