ಅಯೋಧ್ಯೆ, ರಾಮಮಂದಿರ ನಿರ್ಮಾಣವಾದಾಗಿನಿಂದ ನಾನಾ ಕಾರಣಗಳಿಗೆ ಸುದ್ದಿಯಾಗ್ತಿದೆ. ಈಗ ಅಯೋಧ್ಯೆಯ ಅತ್ಯಂತ ಭದ್ರತಾ ಪ್ರದೇಶದಲ್ಲಿರುವ ಭಕ್ತಿ ಪಥ ಮತ್ತು ರಾಮಪಥದಲ್ಲಿ ಅಳವಡಿಸಲಾಗಿದ್ದ 3,800 ಬಿದಿರಿನ ಲೈಟ್ ಮತ್ತು 50 ಲಕ್ಷಕ್ಕೂ ಹೆಚ್ಚು ಮೌಲ್ಯದ 36 ಪ್ರೊಜೆಕ್ಟರ್ ಲೈಟ್‌ಗಳನ್ನು ಕಳವು ಮಾಡಲಾಗಿದೆ ಎಂಬ ವರದಿ ಹೊರ ಬಿದ್ದಿದೆ.
ಪೊಲೀಸರ ಪ್ರಕಾರ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಒಪ್ಪಂದದಡಿಯಲ್ಲಿ ದೀಪಗಳನ್ನು ಅಳವಡಿಸಿದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಯ ಪ್ರತಿನಿಧಿ ಆಗಸ್ಟ್ 9 ರಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ರಾಮಪಥದಲ್ಲಿ 6,400 ಬಿದಿರಿನ ದೀಪಗಳನ್ನು ಮತ್ತು ಭಕ್ತಿ ಪಥದಲ್ಲಿ 96 ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿದೆ. ಮಾರ್ಚ್ 19ರವರೆಗೆ ಎಲ್ಲಾ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಮೇ 9 ರಂದು ಪರಿಶೀಲನೆ ನಡೆಸಿದ ನಂತರ ಕೆಲವು ದೀಪಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ಇಲ್ಲಿಯವರೆಗೆ ಸುಮಾರು 3,800 ಬಿದಿರಿನ ದೀಪಗಳು ಮತ್ತು 36 ಪ್ರೊಜೆಕ್ಟರ್ ದೀಪಗಳನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎಂದು ಸಂಸ್ಥೆಯ ಪ್ರತಿನಿಧಿ ಶೇಖರ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.