ಆರೋಗ್ಯ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಇದರಲ್ಲಿ ಸ್ವಲ್ಪ ವ್ಯತ್ಯಯವಾದರೂ ಕೂಡ ಸಾರ್ವಜನಿಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಅಂತದ್ದರಲ್ಲಿ ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಇದೀಗ ಕಿರಿಯ ವೈದ್ಯರು ಅತ್ಯಂತ ದೀರ್ಘಕಾಲ ಮುಷ್ಕರ ಕೈಗೊಂಡಿದ್ದು ಆರೋಗ್ಯ ಸೇವೆಯಲ್ಲಿ ಅಸ್ತವ್ಯಸ್ತವಾಗಿದೆ.
ಸೂಕ್ತ ವೇತನಕ್ಕೆ ಆಗ್ರಹಿಸಿ ಕಿರಿಯ ವೈದ್ಯರು ಆರು ದಿನಗಳ ಮುಷ್ಕರಕ್ಕೆ ಧುಮುಕಿದ್ದು, ಇದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆಯ 75 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲದ ಮುಷ್ಕರ ಎಂದು ಹೇಳಲಾಗಿದೆ. ಕಿರಿಯ ವೈದ್ಯರ ಈ ಮುಷ್ಕರ ಆರೋಗ್ಯ ಸೇವೆಯ ಮೇಲೂ ಪರಿಣಾಮ ಬೀರಿದೆ.
2022 ರಿಂದಲೂ ಸೂಕ್ತ ವೇತನದ ತಮ್ಮ ಬೇಡಿಕೆಯ ಈಡೇರಿಕೆಗಾಗಿ ಮನವಿ ಸಲ್ಲಿಸಿಕೊಂಡು ಬಂದಿದ್ದ ಕಿರಿಯ ವೈದ್ಯರುಗಳು ಇದೀಗ ಬುಧವಾರದಿಂದ ಮುಷ್ಕರ ಕೈಗೊಂಡಿದ್ದು, ಸಾವಿರಾರು ವೈದ್ಯರು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಇದರ ಪರಿಣಾಮ ತಮ್ಮ ದೈನಂದಿನ ಚಿಕಿತ್ಸೆಯಲ್ಲಿದ್ದ ಲಕ್ಷಾಂತರ ಮಂದಿ ಕಂಗಾಲಾಗಿದ್ದಾರೆ.