ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, ಅಧ್ಯಯನ ನಡೆಯುತ್ತಿದೆ. ಈಗ ದೆಹಲಿಯ ಖಾಸಗಿ ಆಸ್ಪತ್ರೆಯೊಂದು ಯಾವ ರಕ್ತದ ಗುಂಪಿನವರಿಗೆ ಕೊರೊನಾ ಹೆಚ್ಚು ಕಾಡಲಿದೆ ಎಂಬ ಸಂಗತಿಯನ್ನು ಹೇಳಿದೆ.
ಆಸ್ಪತ್ರೆ ನಡೆಸಿದ ಸಂಶೋಧನೆ ಪ್ರಕಾರ, ‘ಎ’, ‘ಬಿ’ ರಕ್ತದ ಗುಂಪು ಹೊಂದಿರುವ ಜನರು ಹಾಗೂ ಆರ್ ಹೆಚ್ ಇರುವ ಜನರು, ‘ಒ’ ರಕ್ತದ ಗುಂಪು ಹೊಂದಿರುವವರಿಗಿಂತ ಹೆಚ್ಚು ಸೋಂಕಿಗೆ ಗುರಿಯಾಗುತ್ತಾರಂತೆ. ಏಪ್ರಿಲ್ 8, 2020ರಿಂದ ಅಕ್ಟೋಬರ್ 4 ರವರೆಗೆ ಆಸ್ಪತ್ರೆಗೆ ದಾಖಲಾದ 2,586 ಕೊರೊನಾ ವೈರಸ್ ಸೋಂಕಿತ ರೋಗಿಗಳ ಮೇಲೆ ಈ ಸಂಶೋಧನೆ ನಡೆಯಿತು ಎಂದು ಸರ್ ಗಂಗಾರಾಮ್ ಆಸ್ಪತ್ರೆ ಮಂಗಳವಾರ ಹೇಳಿದೆ.
ಆಸ್ಪತ್ರೆಯ ಸಂಶೋಧನಾ ವಿಭಾಗ ಮತ್ತು ರಕ್ತ ವರ್ಗಾವಣೆ ಔಷಧ ವಿಭಾಗವು ಈ ಸಂಶೋಧನೆಯನ್ನು ನಡೆಸಿದೆ. ಇದರಲ್ಲಿ ‘ಎ’, ‘ಬಿ’ ರಕ್ತದ ಗುಂಪು ಹೊಂದಿರುವವರು ಹೆಚ್ಚು ದುರ್ಬಲರಾಗಿದ್ದಾರೆ ಎಂದು ಕಂಡುಬಂದಿದೆ, ರಕ್ತ ಗುಂಪು ‘ಒ’, `ಎಬಿ’ ಹೊಂದಿರುವವರು, ಆರ್ ಹೆಚ್ ಮುಕ್ತ ರಕ್ತ ಹೊಂದಿರುವವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ರಕ್ತದ ಗುಂಪು ಮತ್ತು ರೋಗದ ತೀವ್ರತೆ ಮತ್ತು ಸಾವಿನ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಆರ್ ಹೆಚ್ ಫ್ಯಾಕ್ಟರ್ ಎಂದರೇನು ?
ರೀಸಸ್ ಫ್ಯಾಕ್ಟರ್ ಅಥವಾ ಆರ್‌ಎಚ್ ಫ್ಯಾಕ್ಟರ್ ಎಂಬುದು ರಕ್ತದ ಕೆಂಪು ಕಣಗಳ ಮೇಲ್ಮೈಯಲ್ಲಿರಬಹುದಾದ ಪ್ರೋಟೀನ್. ಈ ಅಂಶವನ್ನು ಹೊಂದಿರುವ ರಕ್ತವನ್ನು ಆರ್‌ಎಚ್ ಎಂದು ಕರೆಯಲಾಗುತ್ತದೆ. ಜನರ ರಕ್ತದಲ್ಲಿ ಈ ಅಂಶವಿಲ್ಲದೆ ಹೋದ್ರೆ ಅದನ್ನು ಆರ್ ಹೆಚ್ ಮುಕ್ತ ಎನ್ನಲಾಗುತ್ತದೆ.