ಲಖನೌ: ಉತ್ತರ ಪ್ರದೇಶದ ಫಿಲಿಬಿಟ್‌ನಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರುಣ್ ಗಾಂಧಿ, ಕೆಲವು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ಚಪ್ಪಲಿಯನ್ನು ಎತ್ತಿಕೊಳ್ಳಲು ಲಾಯಕ್ಕಿಲ್ಲದವರೆಲ್ಲ ಇಂದು ಐದೈದು ವಾಹಗಳನ್ನು ಹೊಂದಿರುವ ಬೆಂಗಾವಲು ಪಡೆಗಳಲ್ಲಿ ತಿರುಗಾಡುತ್ತಿದ್ದಾರೆ ಎಂದಿದ್ದಾರೆ.
ಈ ಎಲ್ಲಾ ಸಚಿವರುಗಳು ತಮಗೆ ಬೆಂಬಲ ನೀಡಿ ಎಂದು ಭಿಕ್ಷೆ ಬೇಡುತ್ತಿದ್ದರು. ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಆಗ ಅವರಿಗೆಲ್ಲ ನನ್ನ ಮುಂದೆ ಮಾತನಾಡುವ ಧೈರ್ಯ ಕೂಡ ಇರಲಿಕ್ಕಿಲ್ಲ ಎಂದು ವರುಣ್ ಗಾಂಧಿ ಹೇಳಿದ್ದಾರೆ.
ನಾವು ಕಳೆದ 35 ವರ್ಷಗಳಿಂದ ಫಿಲಿಬಿಟ್‌ನಲ್ಲಿ ರಾಜಕಾರಣ ಮಾಡುತ್ತಿದ್ದೇವೆ. ನನ್ನ ತಾಯಿ ಮನೇಕಾ ಗಾಂಧಿ ದೇಶದ ಅಗ್ರ ಸಂಸದರಲ್ಲಿ ಒಬ್ಬರು. ನಾನು ಮೂರು ಬಾರಿಯ ಸಂಸದ. ನಾನೇನಾದರೂ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆಯೇ? ನಮಗೇನಾದರೂ ದೊಡ್ಡ ಮನೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ.
ಇಂದು ಕೆಲವರಿಗೆ ಮೂರು ಅಂತಸ್ತಿನ ಮನೆಗಳನ್ನು ಉಳಿದುಕೊಳ್ಳಲು ನೀಡಲಾಗಿದೆ. ಇನ್ನುಳಿದ ಕೆಲವರು ಈಗಲೂ ಕೂಡ ತಮ್ಮ ಮನೆಗಳಿಗಾಗಿ ಕಾಯುತ್ತಿದ್ದಾರೆ. ಇದಕ್ಕೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ ಎಂದಿದ್ದಾರೆ.